

ಎನ್.ಮುನಿವೆಂಕಟೇಗೌಡ
ನಗರದ ಮುಖ್ಯರಸ್ತೆ ಪಕ್ಕದಲ್ಲೇ ಕಸದರಾಶಿ ಬಿದ್ದಿದ್ದರೂ ವಿಲೇವಾರಿಗೆ ನಗರಸಭೆ ರ್ನಿಲಕ್ಷ$್ಯ ತೋರುತ್ತಿದ್ದು, ನಗರದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ. ಜತೆಗೆ ಬೀದಿನಾಯಿಗಳ ಕಾಟವೂ ಹೆಚ್ಚಿದೆ.
ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಎಂ.ಜಿ.ರಸ್ತೆ, ದೊಡ್ಡಪೇಟೆ, ಅಮ್ಮಾವಾರಿಪೇಟೆ, ಹೊಸ ಬಸ್ ನಿಲ್ದಾಣ, ಹಳೇ ಬಸ್ ನಿಲ್ದಾಣ ಸೇರಿ ಪ್ರಮುಖ ರಸ್ತೆಗಳ ಪಕ್ಕ ತ್ಯಾಜ್ಯದ ರಾಶಿ ಬಿದ್ದಿದ್ದು, ನಗರಸಭೆ ನಿಯಮಿತವಾಗಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತಿಲ್ಲ. ಪರಿಣಾಮ ರಸ್ತೆಬದಿಯ ತ್ಯಾಜ್ಯ ರಾಶಿಗಳು ಚರಂಡಿ ಸೇರುತ್ತಿದೆ, ಅಲ್ಲದೇ ರಸ್ತೆಗಳನ್ನೂ ಆವರಿಸಿಕೊಳ್ಳುತ್ತಿವೆ. ಮಳೆ, ಕೊಳಚೆ ನೀರಿನೊಂದಿಗೆ ತ್ಯಾಜ್ಯ ಕೊಳೆತು ದುರ್ನಾತ ಬೀರುತ್ತಿದೆ. ಇದಿರಿಂದಾಗಿ ನಾಗರಿಕರು ಮೂಗುಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕ್ಲೀನ್ ಸಿಟಿ ಬಿರುದಿಗೆ ಇದೆಂಥಾ ಸ್ಥಿತಿ: ಡಿ.ಕೆ.ರವಿ ಅವರು ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಕೋಲಾರ ನಗರ ಕ್ಲೀನ್ ಸಿಟಿ ಹೆಸರು ಪಡೆದುಕೊಂಡಿತ್ತು. ಆದರೀಗ ಅಧಿಕಾರಿಗಳ ರ್ನಿಲಕ್ಷ$್ಯದಿಂದಾಗಿ ನಗರದ ಎಲ್ಲೆಡೆ ಕಸದರಾಶಿ ಕಾಣಿಸಿಕೊಳ್ಳುತ್ತಿದ್ದು, ಅವುಗಳ ವಿಲೇವಾರಿಗೆ ನಗರಸಭೆ ಮುಂದಾಗುತ್ತಿಲ್ಲ. ಇದರಿಂದಾಗಿ ಕ್ಲೀನ್ಸಿಟಿ ಹೆಸರಿಗೆ ಮಸಿ ಬಳಿದಂತಾಗಿದೆ. ಅಂದಿನಿಂದ ಮುತುವರ್ಜಿವಹಿಸುತ್ತ ಬಂದಿದ್ದರೇ ಈಗಲೇ ನಗರ ಉತ್ತಮ ಹೆಸರಿನಲ್ಲಿರುತ್ತಿತ್ತು.
35 ವಾರ್ಡನಲ್ಲೂ ಸಮಸ್ಯೆ: ನಗರಸಭೆಯಲ್ಲಿ ಸಿಬ್ಬಂದಿ, ವಾಹನ ಕೊರತೆ ಇದೆ ಎಂಬುವುದನ್ನು ಸಾರ್ವಜನಿಕರು ಕೇಳುವುದಿಲ್ಲ. ಸ್ವಚ್ಛತೆಯನ್ನು ಮಾತ್ರ ಕೇಳುತ್ತಾರೆ. ನಗರದಲ್ಲಿ ರಸ್ತೆ, ಚರಂಡಿ ದುರಸ್ತಿಯಾಗಬೇಕೆಂಬ ಕೂಗು ಇದೆ. ಇದರ ಮಧ್ಯೆ ಕಸ ವಿಲೇವಾರಿಯ ಸಮಸ್ಯೆಯು ಕೋಲಾರವನ್ನು ಕಾಡುತ್ತಿದೆ. ಇದು ಒಂದು ಬಡಾವಣೆಗೆ ಮಾತ್ರ ಸೀಮಿತವಾಗಿಲ್ಲ. ಕೋಲಾರದ 35 ವಾರ್ಡುಗಳಲ್ಲಿನ ಸಮಸ್ಯೆ ಇದೆ. ಇನ್ನೂ ಅಲ್ಪಸಂಖ್ಯಾತರು ವಾಸಿಸುವ ಬಡಾವಣೆಗಳಲ್ಲಂತೂ ವಾರಗಟ್ಟಲೆ ಕಸದ ರಾಶಿ ಹಾಗೇ ಇರುತ್ತವೆ.
ಎಲ್ಲೆಲ್ಲಿ?: 31ನೇ ವಾರ್ಡಿನ ರಹಮತ್ ನಗರ, ಶಾಂತಿನಗರ, ನೂರ್ ನಗರ, ಗಲ್ಪೇಟೆ ಪೊಲೀಸ್ ಠಾಣೆ ಸುತ್ತಲೂ ಮತ್ತು ಗಲ್ಪೇಟೆಯಲ್ಲಿ ಕಸದ ರಾಶಿಗಳು ತಾಂಡವವಾಡುತ್ತಿವೆ. ತೇರಹಳ್ಳಿ ಬೆಟ್ಟದಿಂದ ನಗರದ ಮೂಲಕ ಕೋಲಾರಮ್ಮ ಕೆರೆಗೆ ಹೋಗುವ ರಾಜಕಾಲುವೆಯಲ್ಲಿ ತ್ಯಾಜ್ಯ ತುಂಬಿದೆ. ರಾಜಕಾಲುವೆಗೆ ಅಳವಡಿಸಿರುವ ತಂತಿ ಬೇಲಿ ಅಲ್ಲಲ್ಲಿ ಕಿತ್ತು ಹೋಗಿದ್ದು, ಅಕ್ಕಪಕ್ಕದ ಮನೆಗಳವರು ತ್ಯಾಜ್ಯವನ್ನು ರಾಜಕಾಲುವೆಗೆ ಎಸೆಯುತ್ತಿದ್ದಾರೆ. ರಾಜ ಕಾಲುವೆಯ ಪಕ್ಕದಲ್ಲಿಯೇ ಕಸದ ರಾಶಿ ರಾರಾಜಿಸುತ್ತಿವೆ.
ನಾಯಿಗಳ ಹಾವಳಿ ಹೆಚ್ಚಳ: ನಗರಸಭೆಯಲ್ಲಿ ಪೌರಕಾರ್ಮಿಕರ ಕೊರತೆ, ಕಸ ವಿಲೇವಾರಿ ಮಾಡಲು ಸ್ಥಳಾವಕಾಶ, ವಾಹನಗಳ ಕೊರತೆ, ಚಾಲಕರ ಕೊರತೆ ಮುಂತಾದ ಸಬೂಬು ಹೇಳಿಕೊಂಡೇ ಕಾಲ ಕಳೆಲಾಗುತ್ತಿದೆ. ನಗರಸಭೆ ಅಧಿಕಾರಿಗಳು ನಮ್ಮ ಗಮನಕ್ಕೆ ತಂದರೆ ಸ್ವಚ್ಛಗೊಳಿಸುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಲೇ ದಿನ ಕಳೆಯುತ್ತಿದ್ದಾರೆ. ವಾರ್ಡುಗಳಿಂದ ಆಯ್ಕೆಯಾದ ನಗರಸಭೆ ಸದಸ್ಯರ ಕಣ್ಣಿಗೆ ಕಸದ ರಾಶಿಗಳು ಕಂಡರೂ ಕಾಣದಂತೆ ಓಡಾಡುತ್ತಿದ್ದಾರೆ. ಸಾರ್ವಜನಿಕರು ಕಸದ ಬಗ್ಗೆ ಸದಸ್ಯರ ಗಮನಕ್ಕೆ ತಂದು ವಾರವಾದರೂ ವಿಲೇವಾರಿ ಆಗುತ್ತಿಲ್ಲ. ಬೀದಿ ದೀಪಗಳೂ ಇಲ್ಲ, ನಾಯಿಗಳ ಹಾವಳಿ ಹೆಚ್ಚಾಗಿವೆ ಎಂಬ ಆರೋಪ ಸಾರ್ವಜನಿಕರದು.
ರಹಮತ್ ನಗರ, ನೂರ್ ನಗರ ಹಾಗೂ ಕಾರಂಜಿಕಟ್ಟೆ ರಾಜಕಾಲುವೆಯ ಅಕ್ಕಪಕ್ಕಗಳಲ್ಲಿ ಕಸದ ರಾಶಿಗಳು ವಾರಗಟ್ಟಲೆ ಕೊಳೆಯುತ್ತಿವೆ. ಸಾರ್ವಜನಿಕರು ಕಸದ ರಾಶಿಗಳಿಗೆ ಬೆಂಕಿ ಹಚ್ಚಿ ಹೋಗುತ್ತಾರೆ. ಪ್ಲಾಸ್ಟಿಕ್ ಇರುವುದರಿಂದ ಕೆಟ್ಟ ವಾಸನೆ ಬರುತ್ತಿದೆ. ನಾಯಿಗಳು ಕಸದ ರಾಶಿಗಳ ಸಮೀಪ ದಂಡು ದಂಡಾಗಿ ಇರುತ್ತವೆ. ತ್ಯಾಜ್ಯದಲ್ಲಿ ಬಿದ್ದಿರುವ ಆಹಾರ ಪದಾರ್ಥಗಳನ್ನು ಸೇವಿಸುತ್ತಾ ಸಂತತಿಯು ಹೆಚ್ಚಾಗುತ್ತಿದೆ. ನಗರಸಭೆಯವರು ಆಗಾಗ ತ್ಯಾಜ್ಯ ವಿಲೇವಾರಿ ಮಾಡಿದರೆ ಇಂಥಹ ಸಮಸ್ಯೆಗಳು ಕಡಿಮೆಯಾಗುತ್ತವೆ. - ಮೊಹ್ಮದ್ ಶಾಹೀದ್ ಪಾಷಾ 31ನೇ ವಾರ್ಡ್ ಸದಸ್ಯ ವಿನಾಯಕ ನಗರದಲ್ಲಿ ತ್ಯಾಜ್ಯ ವಾರಗಟ್ಟಲೆ ರಸ್ತೆಗಳಲ್ಲಿಯೇ ಕೊಳೆಯುತ್ತಿವೆ. ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಅಲ್ಲಲ್ಲಿ ಕಸದ ರಾಶಿಗಳಿಗೆ ಎಸೆಯುತ್ತಾರೆ. ಕಾರಂಜಿಕಟ್ಟೆಯ ರಾಜಕಾಲುವೆ, ವಿನಾಯಕ ನಗರ ಮತ್ತು ಗಲ್ಪೇಟೆ ಮೂಲಕ ಹಾದು ಹೋಗುತ್ತದೆ. ಆ ಕಾಲುವೆಗೆ ಮಾಂಸದ ತ್ಯಾಜ್ಯ ಎಸೆಯಲಾಗುತ್ತಿದೆ. ಇದರಿಂದ ನಾಯಿಗಳ ಹಾವಳಿಯೂ ಹೆಚ್ಚಾಗಿದೆ. ತ್ಯಾಜ್ಯ ಕೊಳೆತು ದುರ್ವಾಸನೆ ಬರುತ್ತಿದೆ. - ಶ್ಯಾಮಲಾ ವಿನಾಯಕ ನಗರ ನಿವಾಸಿ