

ವಿನಯ್ ಉಪ್ಪಿನಂಗಡಿ
ಜಿಲ್ಲೆಯ ಜೀವನದಿಗಳಾದ ನೇತ್ರಾವತಿ-ಕುಮಾರಧಾರ ನದಿಗಳು ಸಂಗಮಿಸುವ ಉಪ್ಪಿನಂಗಡಿ ಧಾರ್ಮಿಕ ದೃಷ್ಟಿಕೋನದಲ್ಲಿ ದಕ್ಷಿಣಕಾಶಿ ಎಂದೇ ಹೆಗ್ಗಳಿಕೆ ಪಡೆದಿದ್ದರೆ, ವ್ಯವಸ್ಥೆಯ ಲೋಪದಿಂದಾಗಿ ನದಿ ಒಡಲು ತ್ಯಾಜ್ಯದಿಂದಲೇ ತುಂಬುತ್ತಿದ್ದು, ಪರಿಸರ ಪ್ರೇಮಿಗಳ ಮನಸ್ಸು ಕದಡಿಸಿದೆ. ವಸತಿ ಸಂಕೀರ್ಣಗಳಿಂದ ಹೊರ ಬರುವ ಶೌಚಗೃಹ ಸಹಿತ ಮಲಿನ ನೀರನ್ನು ನದಿಗೆ ಬಿಡುವ , ತ್ಯಾಜ್ಯಗಳನ್ನೂ ನದಿಗೆ ಎಸೆಯುವ ಮೂಲಕ ಜೀವಜಲವನ್ನು ಕಲುಷಿತಗೊಳಿಸುವ ಹೀನಕಾರ್ಯ ನಿರಂತರ ನಡೆಯುತ್ತಿದೆ.
ಘನ ತ್ಯಾಜ್ಯ ನಿರ್ವಹಣೆಯನ್ನು ಸ್ಥಳೀಯ ಪಂಚಾಯಿತಿ ಆಡಳಿತ ವ್ಯವಸ್ಥಿತವಾಗಿ ನಡೆಸುತ್ತಿದ್ದರೂ, ಹಲವಾರು ಮಂದಿಗೆ ಈ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳಲು ಅದ್ಯಾವುದೋ ಸಮಸ್ಯೆ ಇದ್ದಂತಿದೆ. ಹಲವರಿಗೆ ನದಿ ಎನ್ನುವುದು ತ್ಯಾಜ್ಯ ಎಸೆಯಲು ಇರುವ ಪ್ರಕೃತಿದತ್ತ ಸ್ಥಳವೆಂಬ ಭ್ರಮೆ. ಅದಕ್ಕಾಗಿ ಮನೆಯಲ್ಲಿ ಶೇಖರಣೆಯಾಗುವ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ತಂದು ಎಸೆಯುವುದು ನೇರ ನದಿಯ ಒಡಲಿಗೆ. ಈ ರೀತಿ ತ್ಯಾಜ್ಯ ಎಸೆಯಲು ಅವರೆಲ್ಲರೂ ಬಳಸುವ ಸ್ಥಳ ಸೇತುವೆ. ಕೂಟೇಲು ಬಳಿ ಹಾಗೂ ಕುಮಾರಧಾರ ನದಿಯ ಸೇತುವೆ, ನೇತ್ರಾವತಿ ನದಿಯ ಸೇತುವೆಯನ್ನೇ ತಮ್ಮ ತ್ಯಾಜ್ಯ ಎಸೆಯುವ ತಾಣವಾಗಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಗ್ರಾಪಂ ಪಿಡಿಒ ಕೆಲ ಸಮಯದ ಹಿಂದೆ ನದಿಗೆ ತ್ಯಾಜ್ಯ ಎಸೆಯುವ ಮಂದಿಯನ್ನು ಮಧ್ಯರಾತ್ರಿ ಕಾರ್ಯಾಚರಣೆಯ ಮೂಲಕ ಹಿಡಿದು ದಂಡಿಸಿದ್ದರೂ ದುರುಳರ ದುಷ್ಕೃತ್ಯ ನಿಂತಿಲ್ಲ.
ಇಲ್ಲಿನ ನೇತ್ರಾವತಿ ನದಿಯ ಸಮೀಪವಿರುವ ಸಮುದಾಯ ಆರೋಗ್ಯ ಕೇಂದ್ರದ ಆವರಣದ ಹೊರಗೆ ಪ್ಲಾಸ್ಟಿಕ್, ತ್ಯಾಜ್ಯಗಳ ರಾಶಿಯೇ ಇದ್ದು, ಸಾಂಕ್ರಾಮಿಕ ರೋಗ ಉತ್ಪಾದನೆಗೆ ಅವಕಾಶ ನೀಡುತ್ತಿದೆ. ಆದರೂ ಇದನ್ನು ತೆಗೆಸುವ ಗೋಜಿಗೆ ಉಪ್ಪಿನಂಗಡಿ ಗ್ರಾ.ಪಂ. ಮುಂದಾಗಿಲ್ಲ. ಇನ್ನು ಗ್ರಾ.ಪಂ.ನ ತ್ಯಾಜ್ಯ ಘಟಕದ ಬಳಿ ನದಿ ದಂಡೆಯ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ ಬಿದ್ದಿದ್ದು, ನದಿಯು ಮೈದುಂಬಿ ಹರಿದಾಗ ಇವುಗಳು ನದಿ ನೀರನ್ನು ಸೇರಿಕೊಳ್ಳುವ ಸಂಭವವಿದೆ.
ಎರಡು ನದಿಗಳ ದಂಡೆಯಲ್ಲಿ ಉಪ್ಪಿನಂಗಡಿ ಪೇಟೆಯಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲು ಪಂಚಾಯಿತಿ ಆಡಳಿತ ನಿರ್ದೇಶನ ನೀಡಿದೆ. ಅಂತರ್ಜಲ ವೃದ್ಧಿಯ ನಿಟ್ಟಿನಲ್ಲಿ ಇದು ಪರಿಣಾಮಕಾರಿಯಾದರೂ ತ್ಯಾಜ್ಯ ನಿರ್ವಹಣೆಯ ನಿಟ್ಟಿನಲ್ಲಿ ವಿಫಲವಾಗಿದೆ. ನದಿಯ ಜಲಮಟ್ಟ ವೃದ್ಧಿಯಾದಂತೆ ಇಂಗು ಗುಂಡಿಗಳಲ್ಲಿ ನೀರು ತುಂಬಿ ಸಮಸ್ಯೆಗಳೇ ಕಾಣಿಸುತ್ತಿದೆ. ಆದಾಗ್ಯೂ ಇಲ್ಲಿನ ಹೆಚ್ಚಿನ ಹೋಟೆಲ್, ವಸತಿ ಸಂಕೀರ್ಣ, ವಾಣಿಜ್ಯ ಮಳಿಗೆಗಳಿಗೆ ಇಂಗು ಗುಂಡಿಗಳೇ ಇಲ್ಲವಾಗಿದೆ. ಅದರ ದ್ರವ ತ್ಯಾಜ್ಯವೆಲ್ಲಾ ಚರಂಡಿ ಮೂಲಕ ಹರಿದು ನದಿಯನ್ನು ಸೇರುತ್ತಿರುವುದು ವಾಸ್ತವ. ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸುವುದೇ ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗ.
ನದಿಗೆ ಮಲಿನ ನೀರು ಬಿಡುವ ಹೊಟೇಲ್, ವಸತಿ ಸಂಕೀರ್ಣ, ವಾಣಿಜ್ಯ ಸಂಕೀರ್ಣಗಳ ಮಾಲೀಕರ ಸಭೆ ಕರೆದು ಈಗಾಗಲೇ ಚರ್ಚಿಸಲಾಗಿದ್ದು, ನದಿಗೆ ಮಲೀನ ನೀರು ಹರಿಸುವುದನ್ನು ತಡೆಗಟ್ಟಲು ಎಸ್ಡಿಪಿ ನಿರ್ಮಿಸುವ ಬಗ್ಗೆ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದೆ. ಮಳೆಗಾಲ ಮುಗಿದ ಕೂಡಲೇ ಇದರ ಕಾಮಗಾರಿ ನಡೆಸಲಾಗುವುದು. ಸಾರ್ವಜನಿಕ ಸ್ಥಳದಲ್ಲಿ, ನದಿಗೆ ತ್ಯಾಜ್ಯ ಹಾಕುವವರನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸುವ ಕಾರ್ಯ ನಡೆಯುತ್ತಿದೆ. ಕೂಟೇಲು ಕಡೆಯೆಲ್ಲಾ ಸಾರ್ವಜನಿಕ ಸ್ಥಳದಲ್ಲಿ ರಾಶಿ ಬಿದ್ದಿರುವ ಕಸವನ್ನು ತೆಗೆಸಲಾಗಿದೆ. ಒಟ್ಟಾರೆ ಪಂಚಾಯಿತಿ ಆಡಳಿತದ ಪರಿಶ್ರಮದ ಹೊರತಾಗಿಯೂ ಜನರಲ್ಲಿ ನಾಗರಿಕ ಪ್ರಜ್ಞೆ ಜಾಗೃತವಾಗಿಲ್ಲ ಎಂದು ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು ಅಭಿಪ್ರಾಯಪಟ್ಟಿದ್ದಾರೆ.
ದೇವರ ದಯೆಯಿಂದ ನಮ್ಮೂರಿನಲ್ಲಿ ಎರಡು ಜೀವ ನದಿಗಳು ಹರಿಯುತ್ತಿದ್ದು ಇಲ್ಲೇ ಸಂಗಮಗೊಳ್ಳುತ್ತಿವೆ. ಆದರೆ ನದಿಯ ಪಾವಿತ್ರೃ ಕಾಪಾಡಿಕೊಳ್ಳುವಲ್ಲಿ ನಾಗರಿಕ ಸಮಾಜ ಎಡವಿದಂತೆ ಕಾಣಿಸುತ್ತಿದೆ. ಪ್ರಕೃತಿದತ್ತ ಪರಿಸರ ಸಂರಕ್ಷಿಸುವ ಕಾರ್ಯದ ಅರಿವು ಸಮಾಜಕ್ಕೆ ಮೂಡಿಸಬೇಕಾಗಿದೆ.- ರಾಧಾಕೃಷ್ಣ ಭಟ್ ಬೊಳ್ಳಾವುಗೆಳೆಯರು-94 ಸಂಘಟನೆಯ ಅಧ್ಯಕ್ಷ