ರಾ.ಹೆದ್ದಾರಿಯಲ್ಲಿ ನರಕ ದರ್ಶನ : ತ್ಯಾಜ್ಯ ರಾಶಿ ಬಿದ್ದು ದುರ್ನಾತ ಜಪ್ಪಿನಮೊಗರಲ್ಲಿ ಕೃತಕ ಸಮಸ್ಯೆ ಸೃಷ್ಟಿಸಿದ ಮನಪಾ!

road
Published on

ಅನ್ಸಾರ್ ಇನೋಳಿ ಉಳ್ಳಾಲ ಮಳೆ ಬಂದರೆ ರಸ್ತೆಯಿಡೀ ಹರಿದಾಡುವ ದ್ರವತ್ಯಾಜ್ಯ, ಸ್ವಲ್ಪ ಬಿಸಿಲು ಕಾಣಿಸಿದರೂ ರಸ್ತೆಬದಿ ಗಬ್ಬು ನಾರುವ ಕೊಳಚೆ ಸಂಗ್ರಹ. ಇದು ರಾಷ್ಟ್ರೀಯ ಹೆದ್ದಾರಿ 66ರ ಜಪ್ಪಿನಮೊಗರು ಪ್ರದೇಶದ ನೈಜ ಸ್ಥಿತಿ. ರಾಷ್ಟ್ರೀಯ ಹೆದ್ದಾರಿ ಎಂದರೆ ವಿವಿಧ ರಾಜ್ಯಗಳ ವಾಹನಗಳು ಸಂಚರಿಸುವ, ವಿವಿಧ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಾಗಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛವಾಗಿಟ್ಟರೆ ಸ್ಥಳೀಯಾಡಳಿತದ ಜತೆ ಆಯಾ ರಾಜ್ಯದ ಘನತೆಯೂ ಹೆಚ್ಚುತ್ತದೆ. ಕೇರಳ, ತಮಿಳ್ನಾಡು ರಾಜ್ಯಗಳಿಗೆ ಪ್ರತಿದಿನ ನೂರಾರು ವಾಹನಗಳು ಜಪ್ಪಿನಮೊಗರು ಮಾರ್ಗವಾಗಿಯೇ ಸಾಗಬೇಕು. ಆದರೆ ಇಲ್ಲಿ ಮಂಗಳೂರು ಮಹಾನಗರ ಪಾಲಿಕೆಯೇ ನರಕ ಸೃಷ್ಟಿಸಿದ್ದು, ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪಾಲಿಕೆಯ ಘನತ್ಯಾಜ್ಯ ಸಾಗಾಟದ ವಾಹನಗಳು. ಪಾಲಿಕೆಯಿಂದ ಸಂಗ್ರಹಿಸುವ ತ್ಯಾಜ್ಯವನ್ನು ವಾಹನದಲ್ಲಿ ತಂದು ಜಪ್ಪಿನಮೊಗರು ಹೆದ್ದಾರಿ ಬದಿ ನಿಲ್ಲಿಸಿ ಇನ್ನೊಂದು ವಾಹನಕ್ಕೆ ವರ್ಗಾಯಿಸುತ್ತದೆ. ಈ ವಾಹನಗಳಿಂದ ಸುರಿಯುವ ಕಲುಷಿತ ನೀರಿನ ಮೇಲೆಯೇ ತ್ಯಾಜ್ಯ ಸಾಗಾಟದ ವಾಹನಗಳು ಸಂಚರಿಸಿ ಕೆಸರಿನಿಂದಾವೃತವಾಗಿದೆ. ಮಳೆ ಬಂದರೆ ರಸ್ತೆಗೂ ನೀರು ಹರಿದುಬಂದು ಘನ ವಾಹನಗಳಿಂದಾಗಿ ಸಾರ್ವಜನಿಕರು, ದ್ವಿಚಕ್ರ ವಾಹನ ಸವಾರರ ಮೇಲೆ ಸಿಂಚನವಾಗುತ್ತದೆ. ಬೇಸಿಗೆಯಲ್ಲೂ ತ್ಯಾಜ್ಯ ಸಾಗಾಟ ವಾಹನಗಳಿಂದ ಸುರಿಯುವ ನೀರು ಅಲ್ಲೇ ನಿಲ್ಲುತ್ತಿದೆ. ಮಳೆಗಾಲದಲ್ಲೂ ಬೇಸಿಗೆಯಲ್ಲೂ ಇಲ್ಲಿನ ದುರ್ನಾತ ಯಾರಿಗೂ ಬೇಡ. ಕೇರಳ, ತಮಿಳ್ನಾಡು ಅಥವಾ ಭಾಗಗಳಿಂದ ಬಸ್ಸು, ಇತರ ವಾಹನಗಳಲ್ಲಿ ಪ್ರಯಾಣಿಸುವವರು ಗಾಢ ನಿದ್ರೆಯಲ್ಲಿದ್ದರೂ ಜಪ್ಪಿನಮೊಗರು ತಲುಪಿದಾಗ ಹೊರಸೂಸುವ ದುರ್ನಾತಕ್ಕೆ ಎಚ್ಚೆತ್ತುಕೊಳ್ಳುತ್ತಾರೆ. ಇಲ್ಲಿ ಮೂಗು ಮುಚ್ಚಿ ಹೋದರೂ ದುರ್ನಾತದಿಂದ ಪಾರಾಗಲು ಅಸಾಧ್ಯ ಎನ್ನುವ ದುಸ್ಥಿತಿ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆಗಾಗಿ ಕೋಟಿ ಗಟ್ಟಲೆ ಹಣ ಖರ್ಚು ಮಾಡುತ್ತಿರುವ ಮನಪಾ ರಾಷ್ಟ್ರೀಯ ಹೆದ್ದಾರಿಯನ್ನೇ ದುರ್ನಾತಗೊಳಿಸಿರುವುದು ಸಾರ್ವಜನಿಕವಾಗಿ ಟೀಕೆಗೂ ಕಾರಣವಾಗಿದೆ. ಪರಿಸರಾಸಕ್ತರ ಶ್ರಮ, ಸಾರ್ವಜನಿಕರ ದೂರುಗಳು, ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳ ಫಲವಾಗಿ ಪ್ರಸ್ತುತ ದಿನಗಳಲ್ಲಿ ಹಿಂದಿನ ಪರಿಸ್ಥಿತಿ ಇಲ್ಲ. ಆದರೂ ಉಚ್ಚಿಲ, ಕಲ್ಲಾಪು ಸಹಿತ ಕೆಲವೊಂದು ಕಡೆಗಳಲ್ಲಿ ಈಗಲೂ ತ್ಯಾಜ್ಯ ಕಾಣಲು ಸಿಗುತ್ತಿದೆ. ಅದಕ್ಕಿಂತಲೂ ಜಪ್ಪಿನಮೊಗರುವಿನಲ್ಲಿ ಮನಪಾ ಪ್ರಯೋಜಿತ ಸಮಸ್ಯೆ ಸಾರ್ವಜನಿಕರನ್ನು ಕಂಗೆಡಿಸಿದೆ.

ಸ್ವಚ್ಛತೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಶೇಷ ಯೋಜನೆಗಳಿದ್ದು, ಯೋಜನೆ ಜಾರಿಗೆ ತರುವುದು ಸ್ಥಳೀಯಾಡಳಿತ ಜವಾಬ್ದಾರಿ, ಇಂದು ಎಲ್ಲೆಡೆ ಸ್ವಚ್ಛತೆಗಾಗಿ ಸಾಕಷ್ಟು ಕಾರ್ಯಕ್ರಮ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯೇ ಕಲುಷಿತಗೊಳಿಸಿ ನಗರ ಸ್ವಚ್ಛತೆಗೊಳಿಸುವುದು ಮೂರ್ಖತನ. ಜಪ್ಪಿನಮೊಗರುವಿನಲ್ಲಿ ದುರ್ನಾತ ತಡೆಯುವ ನಿಟ್ಟಿನಲ್ಲಿ ಮನಪಾ ತಕ್ಷಣ ಕ್ರಮ ಕೈಗೊಳ್ಳಬೇಕು ರಮೇಶ್ ಶೇಣವ, ಅಧ್ಯಕ್ಷ, ಜನಜೀವನ ಬಾಳೆಪುಣಿ ಎಲ್ಲ ವಾರ್ಡುಗಳ ತ್ಯಾಜ್ಯ ಜಪ್ಪಿನಮೊಗರುವಿಗೆ ತಂದು ವಾಹನಗಳಿಗೆ ವರ್ಗಾಯಿಸಲಾಗುತ್ತಿದೆ, ರಾತ್ರಿ ವೇಳೆ ಕೆಲವರು ತ್ಯಾಜ್ಯ ಎಸೆದು ಹೋಗುತ್ತಾರೆ. ಕಳೆದ ಬಾರಿ ನಾವೇ ಮಣ್ಣು ಹಾಕಿದ್ದೆವು. ಈ ಬಾರಿ ಮತ್ತೆ ಹಿಂದಿನಂತಾಗಿದೆ. ಈ ಹಿನ್ನೆಲೆಯಲ್ಲಿ ಜನವಾಸವಿಲ್ಲದ ನೇತ್ರಾವತಿ ನದಿ ಬಳಿ ತ್ಯಾಜ್ಯ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ವೀಣಾ ಮಂಗಳ, ಮನಪಾ ಸದಸ್ಯೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net