

ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾರಂಭಿಸಲು ಮುಂದಾಗಿರುವ ನೂತನ ತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಕಿನ್ನಿಗೋಳಿಯಲ್ಲಿ ಪ್ರಸ್ತುತ ಒಂದು ತ್ಯಾಜ್ಯ ಘಟಕವಿದ್ದು, ಭವಿಷ್ಯದ ಹಿತದೃಷ್ಟಿಯಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಲ್ಲಕುಮೇರು ಬಳಿ ಮತ್ತೊಂದು ಘಟಕಕ್ಕೆ ಎರಡು ವರ್ಷದ ಹಿಂದೆ ಶಿಲಾನ್ಯಾಸ ನೆರವೇರಿಸಿದೆ. ಇದೀಗ ಮೂರನೇ ತ್ಯಾಜ್ಯ ಘಟಕವನ್ನು ಕಟೀಲು ಸಮೀಪದ ಬಲ್ಲಣದಲ್ಲಿನ 132/1 ಸರ್ವೇ ನಂಬರಿನ ಗೋಮಾಳ ಜಾಗದಲ್ಲಿ ನಿರ್ಮಿಸಲು ಮುಂದಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಆರು ತಿಂಗಳ ಹಿಂದೆಯೇ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದ್ದು, ಅಧಿಕಾರಿಗಳು ಬಂದು ಸ್ಥಳ ಸಮತಟ್ಟು ಮಾಡುವ ಕಾಮಗಾರಿಗೆ ಮುಂದಾದಾಗ ಸ್ಥಳೀಯರು ವಿರೋಧಿಸಿದ್ದರು. ಪ್ರಸ್ತುತ ಜಮೀನಿನ ಪಹಣಿಯಲ್ಲೂ ಬಜ್ಪೆ ಮತ್ತು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಘಟಕಕ್ಕೆ ಮೀಸಲಿರಿಸಲಾಗಿದೆ ಎಂದು ಬದಲಾಗಿದ್ದು, ಇದನ್ನು ಈ ಹಿಂದಿನಂತೆಯೇ ಗೋಮಾಳ ಜಮೀನೆಂದು ಪರಿವರ್ತಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದಕ್ಕೆ ಅಧಿಕಾರಿಗಳು ಒಪ್ಪಿದರೂ ಈವರೆಗೆ ಬದಲಾಗದಿರುವುದರಿಂದ ಗ್ರಾಮಸ್ಥರ ಆಕ್ರೋಶ ಹೆಚ್ಚಿಸಿದೆ.
ಎರಡು ವರ್ಷಗಳ ಹಿಂದೆ ಕಿನ್ನಿಗೋಳಿ, ಕಟೀಲು ಮತ್ತು ಮೆನ್ನಬೆಟ್ಟು ಪಂಚಾಯಿತಿ ಸೇರಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದ್ದು, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ತ್ಯಾಜ್ಯ ನಿರ್ವಹಣೆಗೆ ಇನ್ನೂ ಹಲವು ವರ್ಷಗಳಿಗೆ ಯಾವುದೇ ಸಮಸ್ಯೆ ಇಲ್ಲ. ಕಟೀಲು ದೇವಳದಲ್ಲಿ ಸಾಕಷ್ಟು ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅಲ್ಲಿ ಪ್ರತ್ಯೇಕ ಮಾದರಿ ತ್ಯಾಜ್ಯ ಘಟಕ ಇದೆ. ಆದರೆ ಬಜ್ಪೆ ಪಟ್ಟಣ ಪಂಚಾಯಿತಿಯ ತ್ಯಾಜ್ಯ ನಿರ್ವಹಣೆಗಾಗಿಯೇ ಕಟೀಲು ಸಮೀಪದ ಬಲ್ಲಣದಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಬಜ್ಪೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಾಜ್ಯ ಹೆದ್ದಾರಿ- 67ರ ಪಕ್ಕದಲ್ಲಿ ಕೆಂಜಾರು ಗ್ರಾಮ ವ್ಯಾಪ್ತಿಯ ಅಂತೋನಿ ಕಟ್ಟೆ ಬಳಿ ಒಂದು ಎಕರೆ ಜಮೀನನ್ನು ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಿಸುವ ಸಲುವಾಗಿ ಕಾಯ್ದಿರಿಸಲಾಗಿದೆ. ಎರಡೂವರೆ ವರ್ಷಗಳ ಹಿಂದೆ ಈ ಪ್ರಕ್ರಿಯೆ ನಡೆದಿದ್ದು, ಇದೀಗ ಜಮೀನಿನ ಸರ್ವೇ ಕಾರ್ಯ ನಡೆಸಿ ಗಡಿಗುರುತು ಹಾಕಿಕೊಡುವಂತೆ ಸರ್ವೇ ವಿಭಾಗದವರಿಗೆ ಸೂಚಿಸಲಾಗಿದೆ. ಬಜ್ಪೆ ಪಂಚಾಯಿತಿಯಲ್ಲಿ ಜಮೀನು ಇದ್ದರೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ಘಟಕ ನಿರ್ಮಿಸಿ ಅಲ್ಲಿ ತ್ಯಾಜ್ಯ ನಿರ್ವಹಣೆ ಮಾಡುವ ನಿರ್ಧಾರ ಯಾಕೆ ಎಂಬುವುದು ಸ್ಥಳೀಯರಿಗೆ ಪ್ರಶ್ನೆಯಾಗಿದೆ. ಸದ್ಯ ಬಜ್ಪೆ ಪ.ಪಂ. ವ್ಯಾಪ್ತಿಯ ದಿನವೊಂದಕ್ಕೆ ಟನ್‌ಗಟ್ಟಲೆ ತ್ಯಾಜ್ಯ ಶೇಖರಣೆಗೊಳ್ಳುತ್ತಿದ್ದು, ಮನಪಾ ವ್ಯಾಪ್ತಿಯ ಪಚ್ಚನಾಡಿ ಘಟಕಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ಬಜ್ಪೆ ಪ.ಪಂ. ಮೂಲಗಳು ತಿಳಿಸಿವೆ.
ಕಳೆದ ಐದು ವರ್ಷಗಳ ಹಿಂದೆ ಬಜ್ಪೆ ಸ್ವಚ್ಛತೆ ಹಾಗೂ ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸಿದ್ದ ನಾಲ್ಕು ಮಂದಿ ಸಮಾನಮನಸ್ಕ ಸೇವಾಸಕ್ತರ ತಂಡ ‘ಗ್ರೀನ್ ಬಜ್ಪೆ ಸರ್ವೀಸಸ್’(ಜಿಬಿಎಸ್) ಎಂಬ ಸಂಸ್ಥೆಯ ಮೂಲಕ ಬಜ್ಪೆ ಸ್ವಚ್ಛತೆಯ ಜವಾಬ್ದಾರಿ ವಹಿಸಿದ್ದು, ಬಜ್ಪೆ ಸ್ವಚ್ಛತೆಯಲ್ಲಿ ಮಾದರಿ ಎಂಬಂತೆ ಗುರುತಿಸಲ್ಪಟ್ಟಿತ್ತು. ಮುಂದಕ್ಕೆ ಸಂಸ್ಥೆಗೆ ಸಲ್ಲಬೇಕಾದ ಪಾವತಿಯ ಮೊತ್ತವನ್ನು ನೀಡದೆ ಸ್ಥಳೀಯಾಡಳಿತ ವಂಚಿಸಿದೆ ಎಂಬ ಅಂಶವನ್ನು ಮುಂದಿಟ್ಟುಕೊಂಡು ಸಂಸ್ಥೆ ತನ್ನ ಸೇವಾಕಾರ್ಯ ನಿಲ್ಲಿಸಿದ ಕಾರಣ ಬಜ್ಪೆಯಲ್ಲಿ ಮತ್ತೆ ತ್ಯಾಜ್ಯ ಸಮಸ್ಯೆ ಮಾಮೂಲಿಯಾಗಿದೆ.
ಗೋಮಾಳ ಜಮೀನಿನಲ್ಲಿ ತ್ಯಾಜ್ಯ ಘಟಕ ನಿರ್ಮಾಣಕ್ಕೆ ನಮ್ಮ ವಿರೋಧವಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ತ್ಯಾಜ್ಯ ನಿರ್ವಹಣೆಗೆ ಬೇಕಾದಷ್ಟು ಜಮೀನು ಇದ್ದು, ಇದು ಹಲವು ವರ್ಷಕ್ಕೆ ಸಾಕಾಗಬಹುದು. ಮತ್ತೊಂದು ಘಟಕದ ಅವಶ್ಯಕತೆ ಕಿನ್ನಿಗೋಳಿಗಿಲ್ಲ. ಸರ್ವಾಜನಿಕರ ಆಕ್ಷೇಪದ ಹೊರತಾಗಿಯೂ ಘಟಕ ನಿರ್ಮಾಣಕ್ಕೆ ಮುಂದಾದಲ್ಲಿ ಹೋರಾಟ ನಡೆಸಲಾಗುವುದು. ಸಂಜೀವ ಕಟೀಲು, ಮಾಹಿತಿ ಹಕ್ಕು ಕಾರ್ಯಕರ್ತ
ಸಂಜೀವ ಕಟೀಲು, ಮಾಹಿತಿ ಹಕ್ಕು ಕಾರ್ಯಕರ್ತ