

ಟಿ.ಎನ್. ಜಗದೀಶ್ ಚನ್ನಗಿರಿ
ಸಾರ್ವಜನಿಕರ ಅನುಕೂಲತೆಗಾಗಿ ಅರಣ್ಯ ಇಲಾಖೆಯ 1 ಕೋಟಿ ರೂ. ಅನುದಾನದಡಿ ನಿರ್ವಿುಸಲಾಗಿದ್ದ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಬಳಿಯಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲಾದ ಈ ಉದ್ಯಾನ ಕಸ, ಗಿಡಗಂಟಿಗಳಿಂದ ತುಂಬಿಕೊಂಡಿದ್ದು ಕುಡುಕರ ಅಡ್ಡಾ ಆಗಿ ಮಾರ್ಪಟ್ಟಿದೆ.
ನಲ್ಲೂರು ಗ್ರಾಮದ ಸಮೀಪವಿರುವ ಮಾವಿನಕಟ್ಟೆ ಅರಣ್ಯ ಇಲಾಖೆಗೆ ಸೇರಿದ 94.6 ಎಕರೆ ಗೋಮಾಳ ಜಾಗವನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಗ್ರಾಮಸ್ಥರ ಹೋರಾಟದ ಫಲವಾಗಿ, 2017ರಲ್ಲಿ ಅಂದಿನ ಮಾವಿನಕಟ್ಟೆ ಅರಣ್ಯಾಧಿಕಾರಿ ಬಿ.ಎನ್. ವೀರೇಶ್ ನಾಯ್ಕ ಅವರು ಈ ಜಾಗವನ್ನು ವಶಪಡಿಸಿಕೊಂಡು ಡಿಪಿಆರ್ ಮಾಡಿಸಿದರು.
ನಂತರ, ಅಂದಿನ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಸಹಕಾರದಿಂದ 1 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ, 18 ಎಕರೆ ಪ್ರದೇಶದಲ್ಲಿ ಉದ್ಯಾನವನ ನಿರ್ವಿುಸಲಾಯಿತು. ಜೂನ್ 30, 2018ರಂದು ಉದ್ಘಾಟನೆಗೊಂಡ ಈ ಉದ್ಯಾನದಲ್ಲಿ 1 ಕಿಮೀ ವಾಕಿಂಗ್ ಪಾಥ್, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಗೃಹ ಮತ್ತು ವ್ಯಾಯಾಮ ಶಾಲೆ, ಮಕ್ಕಳ ಆಟಿಕೆಗಳು, ಕುಳಿತುಕೊಳ್ಳಲು ಬೆಂಚುಗಳು ಮತ್ತು ಶುದ್ಧ ನೀರಿನ ಘಟಕ ಸೇರಿ ಹಲವು ಸೌಲಭ್ಯಗಳನ್ನು ಒದಗಿಸಲಾಗಿತ್ತು.
ನಿರ್ವಹಣೆ ಕೊರತೆ
ಉದ್ಘಾಟನೆಯಾದ ಆರಂಭಿಕ ದಿನಗಳಲ್ಲಿ ಜನರಿಂದ ತುಂಬಿರುತ್ತಿದ್ದ ಉದ್ಯಾನವನ, ಈಗ ಸಂಪೂರ್ಣವಾಗಿ ಹಾಳಾಗಿದೆ. ಸರಿಯಾದ ನಿರ್ವಹಣೆ ಇಲ್ಲದ ಕಾರಣ, ಉದ್ಯಾನದಾದ್ಯಂತ ಗಿಡಗಂಟಿಗಳು ಬೆಳೆದು ನಿಂತಿವೆ.
1 ಕಿಮೀ ಉದ್ದದ ವಾಕಿಂಗ್ ಪಾತ್ ಸಂಪೂರ್ಣವಾಗಿ ಗಿಡಗಂಟಿಗಳಿಂದ ಮುಚ್ಚಿಹೋಗಿದೆ. ವ್ಯಾಯಾಮ ಉಪಕರಣಗಳು ಮತ್ತು ಕುಳಿತುಕೊಳ್ಳುವ ಬೆಂಚುಗಳು ತುಕ್ಕು ಹಿಡಿದು ಹಾಳಾಗಿವೆ. ಶುದ್ಧ ನೀರಿನ ಘಟಕ ನಿಷ್ಕ್ರಿಯಗೊಂಡಿದೆ.
ರಾತ್ರಿ ವೇಳೆ ಕುಡುಕರ ಮತ್ತು ದಾರಿಹೋಕರ ಅಡ್ಡಾ ಆಗಿ ಮಾರ್ಪಟ್ಟಿದ್ದು, ಕುಡುಕರು ಬಳಸಿದ ಮದ್ಯದ ಬಾಟಲಿಗಳು ಮತ್ತು ಘನತ್ಯಾಜ್ಯಗಳು ಎಲ್ಲೆಂದರಲ್ಲಿ ಬಿದ್ದಿವೆ. ಒಡೆದ ಬಾಟಲಿ ಚೂರುಗಳಿಂದ ಸಾರ್ವಜನಿಕರಿಗೆ ಗಾಯವಾಗುವ ಅಪಾಯ ಹೆಚ್ಚಾಗಿದೆ.
ಪಾರ್ಕ್ ವೀಕ್ಷಣೆಗೆ ಬಂದ ಸಾರ್ವಜನಿಕರಿಂದ ಪ್ರವೇಶ ಶುಲ್ಕ ಪಡೆದು ಉದ್ಯಾನ ನಿರ್ವಹಣೆ ಮಾಡಲು ನೇಮಿಸಿ ಸಿಬ್ಬಂದಿ ಮಾಯವಾಗಿದ್ದಾರೆ. ಉದ್ಯಾನವನದಲ್ಲಿ ಗಿಡಗಂಟಿ, ಮುಳ್ಳಿನ ಗಿಡಗಳು ಬೆಳೆದು ನಿಂತಿರುವುದರಿಂದ ಪ್ರವಾಸಿಗರು ಮತ್ತು ಸ್ಥಳೀಯರು ಉದ್ಯಾನಕ್ಕೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಜತೆಗೆ ಇಲ್ಲಿ ಸ್ವಚ್ಛತೆ ಎಂಬುದೇ ಮರೀಚಿಕೆಯಾಗಿದೆ.
ವಿಸ್ತೀರ್ಣದಲ್ಲಿ 18 ಎಕರೆ ಇರುವ ಈ ಉದ್ಯಾನವನವು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ಹಾಳಾಗಿದ್ದು, ಸಂಬಂಧಿಸಿದವರು ಈಗಲಾದರೂ ಪಾರ್ಕ್ನ ನಿರ್ವಹಣೆಗೆ ಮುಂದಾಗಬೇಕು. | ಮಾಡಾಳು ವಿರೂಪಾಕ್ಷಪ್ಪ, ಮಾಜಿ ಶಾಸಕ. ಒತ್ತುವರಿ ಜಾಗವನ್ನು ತೆರವುಗೊಳಿಸಿ ಜನರ ಅನುಕೂಲಕ್ಕಾಗಿ ನಿರ್ವಿುಸಿದ ಈ ಉದ್ಯಾನವನವನ್ನು ನಿರ್ವಿುಸಿ ಮುಂದಿನ 5 ವರ್ಷಗಳ ಯೋಜನೆಗಳನ್ನು ರೂಪಿಸಲಾಗಿತ್ತು. ಸಂಗೀತ ವ್ಯವಸ್ಥೆ ಮತ್ತು ಕಾರಂಜಿಗಳಂತಹ ವ್ಯವಸ್ಥೆಗಳನ್ನು ಮಾಡಬಹುದಾಗಿದೆ. ಆದರೆ ಯಾರಿಗೂ ಆಸಕ್ತಿ ಇಲ್ಲದ ಕಾರಣ ಈ ಸ್ಥಿತಿಗೆ ಬಂದಿದೆ. | ಬಿ.ಎನ್. ವೀರೇಶ್ನಾಯ್ಕ, ನಿವೃತ್ತ ಎಸಿಎಫ್, ನೀತಿಗೆರೆ.
ಪ್ರತಿದಿನ ನೂರಾರು ಜನರು ವಾಕಿಂಗ್ಗಾಗಿ ಬರುತ್ತಿದ್ದರು. ಸರಿಯಾದ ನಿರ್ವಹಣೆ ಇಲ್ಲದ ಕಾರಣ ಅವರ ಸಂಖ್ಯೆ ಕಡಿಮೆಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. | ಮಂಜಪ್ಪ, ಗ್ರಾಪಂ ಸದಸ್ಯ, ನಲ್ಲೂರು.