ಕೊಳಚೆ ಕೆರೆ ಕಾಯಕಲ್ಪಕ್ಕೆ ಕೂಡಿ ಬಂದಿಲ್ಲ ಕಾಲ

waste
Published on

ಮೂಲ್ಕಿ: ಮೂಲ್ಕಿ ಪೇಟೆಯ ಮಧ್ಯಭಾಗದಲ್ಲೇ ಕೊಳಚೆ ಕೆರೆ ನಿರ್ಮಾಣವಾಗಿದ್ದು ಹಲವು ವರ್ಷಗಳಿಂದ ಜನಪ್ರತಿನಿಧಿಗಳು ಬದಲಾದರೂ ಈ ಸಮಸ್ಯೆ ಪರಿಹಾರಗೊಂಡಿಲ್ಲ. ಮೂಲ್ಕಿಯ ವ್ಯವಹಾರ ಸಂಕೀರ್ಣಗಳು, ಹೋಟೆಲ್, ಆಸ್ಪತ್ರೆ ಹಾಗೂ ವಸತಿ ಸಂಕೀರ್ಣಗಳ ಕೊಳಚೆ ತ್ಯಾಜ್ಯ ಶೇಖರಣೆಯಾಗಿ ಇಲ್ಲಿ ದೊಡ್ಡ ಕೊಳವಾಗಿ ಮಾರ್ಪಟ್ಟಿದೆ.

ಬಪ್ಪನಾಡು ಗ್ರಾಮದಲ್ಲಿ ಜ್ವರ ಸಂಬಂಧಿತ ಸೋಂಕು ರೋಗಗಳಿಗೆ ಈ ಕೊಳಚೆ ಕೆರೆ ಕಾರಣವಾಗುತ್ತಿದೆ. ಸಾಯಂಕಾಲವಾಗುತ್ತಿದ್ದಂತೆ ನುಸಿಗಳ ದಾಳಿಯಿಂದ ಜನ ಹೈರಾಣಾಗಿದ್ದಾರೆ. ಬಾವಿ ಕೆರೆಗಳಿಗೆ ಕೊಳಚೆಯ ಒರತೆ ಹಬ್ಬಿ ನೀರು ಉಪಯೋಗಿಸಲು ಅಸಾಧ್ಯವಾಗುವಷ್ಟು ಮಾಲಿನ್ಯ ಉಂಟಾಗಿದೆ.

ಈ ಸಮಸ್ಯೆ ಬಗ್ಗೆ ಪಂಚಾಯಿತಿ ಬಳಿ ಕೇಳಿದರೆ ಇದು ರಾಷ್ಟ್ರೀಯ ಹೆದ್ದಾರಿ ಯೋಜನೆಯಿಂದ ಆದ ಸಮಸ್ಯೆ ಎನ್ನುತ್ತಾರೆ. ಆದರೆ ಇಲ್ಲಿನ ವಸತಿ ಸಂಕೀರ್ಣಗಳು, ಹೋಟೆಲ್, ಆಸ್ಪತ್ರೆಗಳು ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸದೆ ನೀರು ಹರಿಯಬಿಟ್ಟಿರುವುದು ಸಮಸ್ಯೆಯ ಮೂಲ ಕಾರಣ. ಜನಪ್ರತಿನಿಧಿಗಳು ಗಮನ ಹರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎನ್ನುತ್ತಾರೆ ಜನ. ಸಾಯಂಕಾಲ ಇಲ್ಲಿ ಮನೆಯ ಬಾಗಿಲು ತೆರೆಯಲು ಅಸಾಧ್ಯ ಎಂಬಂತಾಗುತ್ತದೆ. ಕೊಳಚೆಯಿಂದ ವಾಸನೆ ಮಾತ್ರವಲ್ಲದೆ ನೀರು ಕುಡಿಯಲೂ ಅಯೋಗ್ಯವಾಗಿದೆ ಎನ್ನುತ್ತಾರೆ ಸ್ಥಳೀಯರಾದ ತಾರಾನಾಥ ದೇವಾಡಿಗ ಮತ್ತು ಜಾನ್ ಕ್ವಾಡ್ರಸ್.

ಒಳಚರಂಡಿ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಲಾಗುತ್ತಿದ್ದು, ಪ್ರಶಸ್ತ ಸ್ಥಳದ ಹುಡುಕಾಟ ನಡೆದಿದೆ. ಶೀಘ್ರ ಯೋಜನೆ ಕಾರ್ಯರೂಪಕ್ಕೆ ಬಂದರೆ ಕೊಳಚೆ ಸಮಸ್ಯೆ ಪರಿಹಾರ ಕಾಣಲಿದೆ.

-ಚಂದ್ರ ಪೂಜಾರಿ, ಮುಖ್ಯಾಧಿಕಾರಿ, ಮೂಲ್ಕಿ ನಗರ ಪಂಚಾಯಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net