

ಅನ್ಸಾರ್ ಇನೋಳಿ ಉಳ್ಳಾಲ
ತ್ಯಾಜ್ಯ ವಿಲೇವಾರಿ ಮಾಡಲಾಗದೆ ಅದೆಷ್ಟೋ ಸ್ಥಳೀಯಾಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆಮೇಲೆ ಕೈಹೊತ್ತು ಕೂತಿದ್ದಾರೆ. ಈ ನಡುವೆ ವಾರ್ಡ್‌ನಲ್ಲೇ ತ್ಯಾಜ್ಯ ವಿಲೇವಾರಿ ಮಾಡಿ ರೈತರಿಗೆ ಉಚಿತ ಗೊಬ್ಬರ ನೀಡುವ ವಿನೂತನ ಯೋಜನೆ ಉಳ್ಳಾಲ ಪುರಸಭೆಯಿಂದ ಆರಂಭಗೊಂಡಿದೆ.
ಸರಿಸುಮಾರು ಒಂದೂವರೆ ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಉಳ್ಳಾಲ ಪುರಸಭೆ, ಮಂಗಳೂರು ಕ್ಷೇತ್ರದ ಹೃದಯವಿದ್ದಂತೆ. ತಾಲೂಕು ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ಉಳ್ಳಾಲ ನಿರ್ಣಾಯಕ ಪಾತ್ರದಲ್ಲೇ ಮುಂದುವರಿಯಲಿದೆ. ಅಭಿವೃದ್ಧಿಯ ನಾಗಾಲೋಟದಲ್ಲಿದ್ದರೂ ಒಂದೊಮ್ಮೆ ಸ್ವಚ್ಛತೆ ಕಾಪಾಡುವುದೇ ಸ್ಥಳೀಯಾಡಳಿತಕ್ಕೆ ಸವಾಲಾಗಿತ್ತು. ಆದರೆ ಆಡಳಿತಗಾರರು ಮತ್ತು ಅಧಿಕಾರಿ ವರ್ಗ ವಿಭಿನ್ನ ಯೋಚನೆಗಳ ಮೂಲಕ ಯೋಜನೆಗಳನ್ನು ರೂಪಿಸುತ್ತಾ ಬಂದರೂ ತ್ಯಾಜ್ಯ ವಿಲೇವಾರಿಗೆ ಜಮೀನಿನ ಕೊರತೆ ಎದುರಾಯಿತು. ಈ ಹಿನ್ನೆಲೆಯಲ್ಲಿ ಇಲ್ಲಿನ ತ್ಯಾಜ್ಯ ಮಂಗಳೂರಿಗೆ ಸಾಗಿಸುವುದೊಂದೇ ಮಾರ್ಗ ಎನಿಸಿತು.
ಪ್ರಸ್ತುತ ದಿನಗಳಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಹೆಚ್ಚುತ್ತಿದ್ದು, ಪ್ರತಿದಿನ 17-18 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಪಚ್ಚನಾಡಿಯಲ್ಲೂ ಸಮಸ್ಯೆ ಎದುರಾಗಿ ಪಾಲಿಕೆ ಹೊರಗಿನ ತ್ಯಾಜ್ಯವೇ ಬೇಡ ಎನ್ನುವ ತೀರ್ಮಾನಕ್ಕೆ ಮನಪಾ ಬಂದಿದೆ. ಇದರಿಂದಾಗಿ ಪಚ್ಚನಾಡಿಯನ್ನು ನಂಬಿ ಹಾಯಾಗಿದ್ದ ಸ್ಥಳೀಯಾಡಳಿತ ಚಿಂತೆಗೆ ಬಿದ್ದಿದ್ದು, ಪರ್ಯಾಯ ದಾರಿ ಹುಡುಕುವುದು ಅನಿವಾರ್ಯ ಎನಿಸಿದೆ. ಇದೇ ಸಂದರ್ಭ ಜಾಗ ಇಲ್ಲ ಎಂದು ಕೊರಗದ ಉಳ್ಳಾಲ ಪುರಸಭೆ, ಹಸಿಕಸದಿಂದ ಮನೆಯಲ್ಲೇ ಸಾವಯವ ರಸಗೊಬ್ಬರ ತಯಾರಿಸುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಜತೆಗೆ ಟೆರೇಸ್ ತರಕಾರಿಗೂ ಪ್ರೋತ್ಸಾಹ ನೀಡುತ್ತಿದೆ.
ಕಲ್ಲಾಪು ವಾರ್ಡ್‌ನಲ್ಲಿ ಕೆಲಸ ಆರಂಭ: ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಪುರಸಭೆ, ಈಗ ವಾರ್ಡ್‌ಗಳಲ್ಲೇ ಹಸಿಕಸ ವಿಲೇವಾರಿಗೆ ಮುಂದಾಗಿದೆ. ಇದರ ಮೊದಲ ಹಂತವಾಗಿ ಕಲ್ಲಾಪು ವಾರ್ಡ್‌ನಲ್ಲಿ ಈ ಕೆಲಸ ಆರಂಭಿಸಿದೆ. ಇಲ್ಲಿ ಸ್ಥಳೀಯ ಕೃಷಿಕರೊಬ್ಬರು ನೀಡಿದ ಐದು ಸೆಂಟ್ಸ್ ಜಮೀನಿನಲ್ಲೇ ಘಟಕ ನಿರ್ಮಿಸಲಾಗಿದ್ದು, ವಾರ್ಡ್‌ನಲ್ಲಿ ಸಂಗ್ರಹವಾಗುವ ಹಸಿಕಸ ವಿಲೇವಾರಿಗೆ ಮುಂದಾಗಿದೆ. ಈ ಘಟಕದ ಉಸ್ತುವಾರಿಯನ್ನು ಪರಿಣತಿ ಹೊಂದಿರುವ ಸಫ್ವಾನ್ ಎಂಬುವರು ವಹಿಸಿಕೊಂಡಿದ್ದಾರೆ.
ರೈತರಿಗೆ ಉಚಿತ ಗೊಬ್ಬರ!: ಕಲ್ಲಾಪು ವಾರ್ಡ್‌ನಲ್ಲಿ 250 ಮನೆಗಳಿದ್ದು, ಪ್ರತಿದಿನ 500 ಕೆ.ಜಿ ಹಸಿ ಕಸ ಸಂಗ್ರಹವಾಗುತ್ತಿದೆ. ಇದನ್ನು ಘಟಕದಲ್ಲಿ ಸಾವಯವ ಗೊಬ್ಬರವನ್ನಾಗಿಸಲು ಯೋಜನೆ ರೂಪಿಸಲಾಗಿದೆ. ಒಂದು ಟನ್ ಸಾಮರ್ಥ್ಯದ ಘಟಕ ಇದಾಗಿದ್ದು, ಸಾವಯವ ಗೊಬ್ಬರ ತಯಾರಿಸಿ ಆರಂಭಿಕ ಹಂತದಲ್ಲಿ ರೈತರಿಗೆ ಉಚಿತವಾಗಿ ವಿತರಿಸುವ ಯೋಜನೆ ಪುರಸಭೆಯದ್ದಾಗಿದೆ. ತ್ಯಾಜ್ಯದಿಂದ ದುರ್ವಾಸನೆ ಬರದಂತೆ ಹಾಗೂ ಶೀಘ್ರ ಗೊಬ್ಬರವಾಗಿ ಪರಿವರ್ತನೆಯಾಗುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿಯೂ ಯೋಜನೆ ರೂಪಿಸಲಾಗಿದೆ. ಇದು ಯಶಸ್ವಿಯಾದಲ್ಲಿ ಮುಂದಕ್ಕೆ ಪ್ರತೀ ವಾರ್ಡ್‌ನಲ್ಲೂ ಜಾರಿಗೆ ತರುವ ಇರಾದೆ ಪುರಸಭೆಯದ್ದು.
ಸ್ವಚ್ಛ, ಮಾದರಿ ಉಳ್ಳಾಲ ರೂಪಿಸಬೇಕಾದರೆ ತ್ಯಾಜ್ಯ ಸಮಸ್ಯೆಗೆ ಮೊದಲು ಪರಿಹಾರ ಸಿಗಬೇಕು. ಆ ನಿಟ್ಟಿನಲ್ಲಿ ಈಗಾಗಲೇ ಕೆಲವು ಮನೆಗಳಲ್ಲಿ ತರಕಾರಿ ಬೆಳೆಗೆ ಆದ್ಯತೆ ನೀಡಿ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ. ಕಲ್ಲಾಪುವಿನಲ್ಲಿ ಘಟಕ ನಿರ್ಮಿಸಲಾಗಿದ್ದು, ವಾರ್ಡ್‌ನಲ್ಲಿ ಸಂಗ್ರಹವಾದ ಹಸಿತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲು ಪುರಸಭೆಯ ಇಬ್ಬರು ಸಿಬ್ಬಂದಿ ನೇಮಿಸಲಾಗಿದೆ. ಸ್ಥಳೀಯ ಸಮಿತಿ ರಚಿಸಲು ಸೂಚಿಸಲಾಗಿದೆ. ರಾಯಪ್ಪ, ಪೌರಾಯುಕ್ತ, ಉಳ್ಳಾಲ ಪುರಸಭೆ ಕನಿಷ್ಠ ಹತ್ತು ವಾರ್ಡ್‌ಗಳಲ್ಲಾದರೂ ಸಾವಯವ ಗೊಬ್ಬರ ತಯಾರಿಕಾ ಘಟಕ ಸ್ಥಾಪಿಸಿದರೆ ಪಚ್ಚನಾಡಿಗೆ ಹೋಗುವ ತ್ಯಾಜ್ಯ ಪ್ರಮಾಣ ಕಡಿಮೆಯಾಗಲಿದೆ. ಇದು ಜಾಗೃತಿಯಿಂದಲೇ ಆಗಬೇಕಾದ ಕೆಲಸವಾಗಿರುವ ಹಿನ್ನೆಲೆಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿರುವ ಕೃಷಿಯಾಧಾರಿತ ಪ್ರದೇಶಗಳ ಜನರಿಗೆ ಜಾಗೃತಿ ಮೂಡಿಸಿ ಘಟಕ ನಿರ್ಮಿಸುವ ಯೋಜನೆ ಇದೆ. ಕಲ್ಲಾಪು ಘಟಕ ಇದಕ್ಕೆ ಪ್ರೇರಣೆಯಾಗಲಿದೆ. ಕಿಶೋರ್ ಅತ್ತಾವರ, ಆಡಳಿತ ಸಮಿತಿ ಸದಸ್ಯ, ರೋಶನಿ ನಿಲಯ