ಹುಬ್ಬಳ್ಳಿ: ನಗರದಲ್ಲಿ ಸಂಗ್ರಹವಾದ ಒಣ ಹಾಗೂ ಇ- ತ್ಯಾಜ್ಯ ಮರುಬಳಕೆಗೆ ಮಾರಾಟ ಮಾಡಿ ಬಂದ ಹಣವನ್ನು ಭಾರತೀಯ ರಕ್ಷಣಾ ನಿಧಿ ಹಾಗೂ ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಅಕ್ಕಾ ಫೌಂಡೇಶನ್ ಅಧ್ಯಕ್ಷ ವೀರೇಶ ಅರಕೇರಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ತಾಜ್ಯ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರದ ನಿಯಮಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಗರದಲ್ಲಿ ತ್ಯಾಜ್ಯದಿಂದ ಪರಿಸರದ ಮೇಲೆ ಆಗುತ್ತಿರುವ ಕೆಟ್ಟ ಪರಿಣಾಮಗಳ ಕುರಿತು ಹಲವರು ನಮಗೆ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೇ ಒಣ ತ್ಯಾಜ್ಯ ಹಾಗೂ ಇ-ತ್ಯಾಜವನ್ನು ನಮಗೆ ನೀಡುತ್ತಿದ್ದಾರೆ. ಇದನ್ನು ಮರು ಬಳಕೆಗೆ ಮಾರಾಟ ಮಾಡಲಾಗುತ್ತಿದೆ ಎಂದರು.
ಮಾರಾಟದಿಂದ ಬಂದ 10 ಸಾವಿರ ರೂ. ರಕ್ಷಣಾ ನಿಧಿಗೆ ಹಾಗೂ 2500 ರೂ.ಗಳನ್ನು ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. ಇದನ್ನು ನಮ್ಮ ರಕ್ಷಣೆ ಮಾಡುತ್ತಿರುವ ಯೋಧರಿಗಾಗಿ ಸಮರ್ಪಿಸಲಾಗಿದೆ ಎಂದರು.
ಪ್ರತಿ ವರ್ಷವೂ ಪ್ಲಾಸ್ಟಿಕ್ ಬಳಕೆ ಪ್ರಮಾಣ ಹೆಚ್ಚಾಗುತ್ತ ಸಾಗಿದೆ. ಏಕ ಬಳಕೆ ಪ್ಲಾಸ್ಟಿಕ್ ಮಾರಾಟದ ಬದಲು ಉತ್ಪಾದನೆಗೆ ಕಡಿವಾಣ ಹಾಕಬೇಕು. ನಗರಗಳ ಸ್ವಚ್ಚತೆ ದೃಷ್ಟಿಯಿಂದ ಅಗತ್ಯ ಶೌಚಗೃಹ ನಿರ್ಮಿಸಬೇಕು. ಒಣ ಹಾಗೂ ಹಸಿ ತ್ಯಾಜ್ಯ ಪ್ರತ್ಯೇಕಿಸಿ ಕಸ ಸಂಗ್ರಹಕಾರರಿಗೆ ನೀಡಬೇಕು. ಈ ವಿಷಯದಲ್ಲಿ ಸರ್ಕಾರಗಳು ಸಮರ್ಪಕ ಕಾಯ್ದೆಗಳನ್ನು ರೂಪಿಸಿವೆ. ಆದರೆ, ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ. ಪರಿಸರ ರಕ್ಷಣೆ ಸಲುವಾಗಿ ಕಾಯ್ದೆಗಳನ್ನು ಸರಿಯಾಗಿ ಜಾರಿಗೊಳಿಸಬೇಕು ಎಂದರು.
ಪರಿಸರಕ್ಕಾಗಿ ನಾವು ಸಂಘಟನೆಯ ಸರಸ್ವತಿ ಪೂಜಾರಿ ಅವರು ಮಾತನಾಡಿ, ನಗರದಲ್ಲಿ ತ್ಯಾಜ್ಯ ಸಂಗ್ರಹದಲ್ಲಿ ಆಗುತ್ತಿರುವ ನ್ಯೂನತೆಗಳ ಬಗ್ಗೆ ಸಾಕಷ್ಟು ಬಾರಿ ಪಾಲಿಕೆಗೆ ಮಾಹಿತಿ ನೀಡಿದ್ದೇವೆ. ಆದರೆ, ಯಾವುದೇ ಬದಲಾವಣೆ ಕಾಣದ ಹಿನ್ನೆಲೆಯಲ್ಲಿ ಪರಿಸರ ಹಾಗೂ ಮಹಾನಗರದ ಸ್ವಚ್ಛತೆ ದೃಷ್ಟಿಯಿಂದ ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು ಪ್ರತಿಭಟನೆ ಹಮ್ಮಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಸಂಘಟನೆಯ ಸುನೀಲ ಬದ್ದಿ, ಶ್ರುತಿ ಭೂಸನೂರಮಠ, ನಿರ್ಮಲಾ ಹಿರೇಗೌಡರ, ಕಮಲಾಕ್ಷಿ ಭದ್ರಾಪುರ ಇತರರು ಗೋಷ್ಠಿಯಲ್ಲಿದ್ದರು.