ತ್ಯಾಜ್ಯ ವಿಲೇವಾರಿಗೆ ಬಡಗ ಎಡಪದವು ಸ್ವಾವಲಂಬನೆ

badaga edapadhavu new
Published on

ಪ್ರಕಾಶ್ ಮಂಜೇಶ್ವರ ಮಂಗಳೂರು

ಬಹುತೇಕ ತ್ಯಾಜ್ಯ ಸಂಸ್ಕರಣೆ ಘಟಕಗಳ ವೈಫಲ್ಯ, ಹೊಸ ಘಟಕ ಸ್ಥಾಪಿಸಲು ಸಾರ್ವಜನಿಕರ ವಿರೋಧದ ಮಧ್ಯೆ 11 ಮಂದಿ ಸದಸ್ಯರಿರುವ ಬಡಗ ಎಡಪದವು ಎಂಬ ಪುಟ್ಟ ಗ್ರಾಮ ಪಂಚಾಯಿತಿ ತನ್ನ ಕಚೇರಿ ಮಗ್ಗುಲಿನ ಖಾಲಿ ಕಟ್ಟಡದಲ್ಲೇ ವೈಜ್ಞಾನಿಕವಾಗಿ ಘಟಕ ಸ್ಥಾಪಿಸಿ ಗಮನ ಸೆಳೆದಿದೆ.

ಗ್ರಾಪಂ ಅಧಿಕಾರಿ ವರ್ಗ, ಆಡಳಿತ ಮಂಡಳಿ ಪ್ರತಿನಿಧಿಗಳು ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯಿತಿ ಸಹಿತ ತ್ಯಾಜ್ಯ ಸಂಸ್ಕರಣಾ ಘಟಕಗಳ ವಿವಿಧ ಅಭಿವೃದ್ಧಿ ಮಾದರಿಗಳ ಅಧ್ಯಯನ ನಡೆಸಿ ಹೊಸ ಘಟಕದ ತಯಾರಿ ಪೂರ್ಣಗೊಳಿಸಿದ್ದಾರೆ. ಬಡಗ ಎಡಪದವಿನ ಎಲ್ಲ ರಸ್ತೆಗಳಲ್ಲೂ ಜುಲೈ 13ರಿಂದ ಘನ ತ್ಯಾಜ್ಯ ಸಂಗ್ರಹದ ಲಾರಿ ಓಡಾಡಲು ಆರಂಭಿಸಿವೆ. ವಿವಿಧ ರೂಪಗಳಲ್ಲಿ ಮನೆಯಲ್ಲಿ ಗುಡ್ಡೆ ಬೀಳುತ್ತಿದ್ದ ಘನ ತ್ಯಾಜ್ಯ ವಿಲೇವಾರಿಗೆ ಮಾರ್ಗ ದೊರೆತಿರುವುದು ಗ್ರಾಮದ ಜನರಲ್ಲಿ ಖುಶಿ ತಂದಿದೆ.

ತ್ಯಾಜ್ಯ ನಿರ್ವಹಣೆ ಹೇಗೆ?

ಹಸಿ ತ್ಯಾಜ್ಯವನ್ನು ಜನರೇ ನಿರ್ವಹಿಸಬೇಕು. ಇದನ್ನು ಗೊಬ್ಬರವಾಗಿ ಬಳಸಲು ಅವಕಾಶ ಇರುವುದರಿಂದ ಸಮಸ್ಯೆ ಇಲ್ಲ. ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಎಲ್ಲ ಮನೆ, ವ್ಯಾಪಾರ ಕೇಂದ್ರಗಳಿಗೆ ಒಂದು ಹಸಿರು ಕಸದ ಬುಟ್ಟಿ ಹಾಗೂ ಒಣ ಕಸ ಸಂಗ್ರಹಿಸಲು ತಲಾ ಎರಡು ಬುರೋ ಬ್ಯಾಗ್ ವಿತರಿಸಲಾಗಿದೆ. ಸಂಗ್ರಹವಾದ ಪ್ಲಾಸ್ಟಿಕ್ ಹಾಗೂ ಪೇಪರ್ ಮಾರಾಟ ಮಾಡಲಾಗುತ್ತದೆ. ಪ್ಲಾಸ್ಟಿಕ್ ಸಹಿತ ಚಪ್ಪಲ್, ರಬ್ಬರ್, ಚರ್ಮ ಮುಂತಾದ ಇತರ ಘನ ವಸ್ತುಗಳನ್ನು ಸ್ಥಳದಲ್ಲೇ ಬೂದಿ ಮಾಡುವ ಎಂಆರ್‌ಎಫ್(ಮೆಟೀರಿಯಲ್ ರಿಕವರಿ ಫೆಸೆಲಿಟಿ) ತಂತ್ರಜ್ಞಾನವನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನ ನಡೆಯುತ್ತಿದೆ.

ಜನಜಾಗೃತಿ

ಆಶಾ ಕಾರ್ಯಕರ್ತರ ಮೂಲಕ ಎಲ್ಲ ಮನೆಗಳಿಗೆ ಹೊಸ ಯೋಜನೆ ಸ್ವರೂಪ ಬಗ್ಗೆ ಕರಪತ್ರ ವಿತರಣೆ ಹಾಗೂ ಮಾಹಿತಿ ಒದಗಿಸುವ ಕಾರ್ಯಕ್ರಮ ನಡೆದಿದೆ. ಜತೆಗೆ ವಾಟ್ಸಪ್ ಗ್ರೂಪ್‌ಗಳ ಮೂಲಕ ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳನ್ನು ಜೋಡಿಸುವ ಪ್ರಯತ್ನ ನಡೆಯುತ್ತಿದೆ.

ಗ್ರಾಮ ಪಂಚಾಯಿತಿ ಕಟ್ಟಡದ ಹಿಂಭಾಗದಲ್ಲೇ ಉಪಯೋಗ ಶೂನ್ಯವಗಿದ್ದ ಖಾಲಿ ಕಟ್ಟಡವೊಂದನ್ನು ಘನ ತ್ಯಾಜ್ಯ ಸಂಸ್ಕರಣ ಘಟಕವಾಗಿ ರೂಪಿಸಲಾಗಿದೆ. ಹೊರಗಿನಿಂದ ಸಂಗ್ರಹವಾದ ಘನ ತ್ಯಾಜ್ಯಗಳಲ್ಲಿ ಬಣ್ಣದ ಪ್ಲಾಸ್ಟಿಕ್, ಬಿಳಿ ಪ್ಲಾಸ್ಟಿಕ್, ಸ್ವಚ್ಛಗೊಳಿಸಿದ ಹಾಲು, ಮೊಸರು ಪ್ಯಾಕೆಟ್ ಹಾಗೂ ಇತರ ವಸ್ತುಗಳನ್ನು ಪ್ರತ್ಯೇಕಿಸಲಾಗುತ್ತದೆ. ಎಲ್ಲ ರೀತಿಯ ಬಳಸಿದ ಪ್ಲಾಸ್ಟಿಕ್ ಮರು ಬಳಸಲು ಮಾರಾಟ ಮಾಡುವುದು. ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಕಾದಿರಿಸಿದ್ದ 3.5 ಲಕ್ಷ ರೂ. ಹಾಗೂ ಇದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರ ಪ್ರಸ್ತಾವನೆ ಪ್ರಕಾರ ಗ್ರಾಮೀಣ ನೈರ್ಮಲ್ಯ ಇಲಾಖೆಯಿಂದ ಅನುಮೋದನೆ ಪಡೆದ 20 ಲಕ್ಷ ರೂ. ಅನುದಾನವನ್ನು ಹೊಸ ಯೋಜನೆಗೆ ಬಳಸಲಾಗುತ್ತಿದೆ.

ಸೆ.1ರಿಂದ ಶುಲ್ಕ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಗೆ ಸೆ.1ರಿಂದ ಗ್ರಾಮ ಪಂಚಾಯಿತಿ ಪ್ರತಿ ಮನೆಯಿಂದ ಮಾಸಿಕ 30 ರೂ., ವ್ಯಾಪಾರ ಕೇಂದ್ರಗಳಿಂದ 100 ರೂ. ವಸೂಲಿ ಮಾಡಲು ಉದ್ದೇಶಿಸಿದೆ.

ಹೊಸ ಯೋಜನೆಗೆ ಸಾರ್ವಜನಿಕರಿಂದ ನಿರೀಕ್ಷೆಗೂ ಮೀರಿ ಸಹಕಾರ ದೊರೆಯುತ್ತಿದೆ. ಪ್ಲಾಸ್ಟಿಕ್ ಉರಿಸಬಾರದು ಎಂದು ಎಲ್ಲರೂ ಹೇಳುತ್ತಾರೆ. ಆದರೆ ದೊಡ್ಡ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಏನು ಮಾಡುವುದು ? ಎನ್ನುವ ಜನರ ಪ್ರಶ್ನೆಗೆ ಇಲ್ಲಿಯ ತನಕ ಸಮರ್ಪಕ ಉತ್ತರ ಇರಲಿಲ್ಲ. ಈಗ ದೊರೆತಿದೆ. ಹರೀಶ್ ಕೆ.ವಿ., ನಿಕಟಪೂರ್ವ ಉಪಾಧ್ಯಕ್ಷ, ಬಡಗ ಎಡಪದವು ಗ್ರಾಪಂನಲ್ಲಿ ಆರಂಭವಾಗಿರುವ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಜಿಲ್ಲೆಯ ಇತರ ಕಡೆಗೆ ಹೋಲಿಸಿದರೆ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ವಿನೀತ್ ಪೂಜಾರಿ, ಗ್ರಾಪಂ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net