

ಭರತ್ ಶೆಟ್ಟಿಗಾರ್ ಮಂಗಳೂರು
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಸಿಕಸ ಒಣಕಸ ವಿಂಗಡಿಸಿ ತ್ಯಾಜ್ಯ ವಿಲೇವಾರಿ ಕಡ್ಡಾಯ ಮಾಡಿರುವುದು, ಪಾಲಿಕೆಗೆ ಹೊಂದಿಕೊಂಡಿರುವ ಸುತ್ತಮುತ್ತಲಿನ ಕೆಲವು ಗ್ರಾಮ ಪಂಚಾಯಿತಿಗಳಿಗೆ ಸಮಸ್ಯೆ ತಂದಿದೆ.
ಪಾಲಿಕೆ ವ್ಯಾಪ್ತಿ ಹೊರಗಿನ, ತ್ಯಾಜ್ಯ ವಿಲೇವಾರಿ ಘಟಕ ಹೊಂದಿರದ ಗ್ರಾಪಂಗಳು ಕಸ ವಿಲೇವಾರಿಗೆ ಪಚ್ಚನಾಡಿ ಡಂಪಿಂಗ್ ಯಾರ್ಡನ್ನೇ ಅವಲಂಬಿಸಿವೆ. ಇಲ್ಲಿಯವರೆಗೆ ಹಸಿ ತ್ಯಾಜ್ಯ-ಒಣ ತ್ಯಾಜ್ಯ ಎರಡನ್ನೂ ಒಟ್ಟಿಗೆ ಲಾರಿಯಲ್ಲಿ ತುಂಬಿಸಿ ಸಾಗಿಸಲಾಗುತ್ತಿತ್ತು. ಪಾಲಿಕೆ ವ್ಯಾಪ್ತಿಯಲ್ಲೂ ಈ ಹಿಂದೆ ಪ್ರತ್ಯೇಕಿಸಿ ನೀಡುವಂತೆ ಸೂಚಿಸಿದ್ದರೂ, ಅಷ್ಟಾಗಿ ಪಾಲನೆಯಾಗುತ್ತಿರಲಿಲ್ಲ. ಇದರಿಂದ ಗ್ರಾಪಂಗಳಿಗೂ ಸಮಸ್ಯೆಯಾಗಿರಲಿಲ್ಲ. ಪ್ರಸ್ತುತ ಕಡ್ಡಾಯ ಮಾಡಿರುವುದರಿಂದ ಒಟ್ಟಿಗೆ ತರುವ ತ್ಯಾಜ್ಯವನ್ನು ಪಚ್ಚನಾಡಿಯಲ್ಲಿ ಸ್ವೀಕರಿಸುವುದಿಲ್ಲ. ಇದರಿಂದ ಗ್ರಾಪಂಗಳೂ ತ್ಯಾಜ್ಯ ಪ್ರತ್ಯೇಕಿಸಿ ನೀಡಬೇಕಿದೆ.
ಸ್ಥಗಿತಗೊಂಡ ಸಂಗ್ರಹ: ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಸೂಚನೆ ನೀಡಿದ್ದರೂ, ಜನ ಸ್ಪಂದಿಸದ ಕಾರಣ ಕೆಲವು ಗ್ರಾಪಂಗಳಲ್ಲಿ ಸದ್ಯ ಮನೆಮನೆ ತ್ಯಾಜ್ಯ ಸಂಗ್ರಹ ನಿಲ್ಲಿಸಲಾಗಿದೆ. ಜನರಿಗೆ ಇನ್ನೊಂದು ಬಾರಿ ಮನವರಿಕೆ ಮಾಡಲು ಉದ್ದೇಶಿಸಲಾಗಿದೆ. ಈ ನಡುವೆ ತ್ಯಾಜ್ಯ ಪ್ರತ್ಯೇಕವಾಗಿಸಲು ಸಹಾಯವಾಗುವಂತೆ ಹಸಿರು-ಕೆಂಪು ಬಣ್ಣದ ಬಕೆಟ್ ನೀಡಲು ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ. ಈ ನಡುವೆ ಕಸ ತೆಗೆದುಕೊಂಡು ಹೋಗದಿರುವುದರಿಂದ ಬಹುತೇಕ ಮನೆಗಳ ಆವರಣ ಗೋಡೆಗಳಲ್ಲಿ ಪ್ಲಾಸ್ಟಿಕ್‌ಗಳಲ್ಲಿ ಕಟ್ಟಿಡಲಾದ ಕಸ ಮಳೆಗೆ ಒದ್ದೆಯಾಗಿ ಕೊಳೆಯುತ್ತಿದೆ. ರಸ್ತೆ ಬದಿ ಎಸೆಯುವುದೂ ಹೆಚ್ಚಾಗಿದೆ.
ಉಳ್ಳಾಲ-ಬಂಟ್ವಾಳದಿಂದಲೂ ತ್ಯಾಜ್ಯ: ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಸುತ್ತಲಿನ ಸುಮಾರು 6-7 ಗ್ರಾಮಗಳಿಂದ ಮಾತ್ರವಲ್ಲದೆ, ದೂರದ ಉಳ್ಳಾಲ ನಗರಸಭೆ, ಬಂಟ್ವಾಳ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವೂ ಪ್ರತಿ ನಿತ್ಯ ಬರುತ್ತದೆ. ಇದಕ್ಕೆ ವಿರೋಧವಿದ್ದರೂ ಕಳೆದ ಹಲವಾರು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ. ಡಂಪಿಂಗ್ ಯಾರ್ಡ್‌ಗೆ ಸಂಬಂಧಿಸಿ ಪಾಲಿಕೆ ಏನು ನಿರ್ಣಯ ತೆಗೆದುಕೊಳ್ಳುವುದೋ ಅದು ಅವರಿಗೂ ಅನ್ವಯಿಸುತ್ತದೆ ಎನ್ನುತ್ತಾರೆ ಮೇಯರ್. ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳು ತ್ಯಾಜ್ಯ ವಿಲೇವಾರಿ ಘಟಕ ಹೊಂದಿರಬೇಕು ಎನ್ನುವ ಜಿಲ್ಲಾಡಳಿತದ ಆದೇಶ ಇನ್ನೂ ಪಾಲನೆಯಾಗಿಲ್ಲ.
ಕೋವಿಡ್ ತ್ಯಾಜ್ಯಕ್ಕೆ ಅಡ್ಡಿಯಿಲ್ಲ: ಕೋವಿಡ್ ಸೋಂಕಿತ ವ್ಯಕ್ತಿಗಳಿರುವ ಮನೆಯಿಂದ ನಿತ್ಯ ಕಸ ಸಂಗ್ರಹಿಸುವ ವ್ಯವಸ್ಥೆಗೆ ಅಡ್ಡಿಯಾಗಿಲ್ಲ. ಹಳದಿ-ಕಪ್ಪು ಚೀಲಗಳನ್ನು ನೀಡಿ ಪ್ರತಿ ನಿತ್ಯ ಜೈವಿಕ ಮೆಡಿಕಲ್ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಇದನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ವಿಲೇವಾರಿ ಮಾಡುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಪ್ರಾಥಮಿಕ ಆರೋಗ್ಯಗಳಿಂದ ನಿತ್ಯ ವಿಲೇವಾರಿಯಾಗುತ್ತಿಲ್ಲ ಎನ್ನುವ ಆರೋಪವಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಸಿ-ಒಣಕಸ ಬೇರೆಬೇರೆಯಾಗಿ ನೀಡುವುದು ಕಡ್ಡಾಯ ಮಾಡಿರುವುದರಿಂದ ಪಚ್ಚನಾಡಿಯಲ್ಲಿ ಗ್ರಾಪಂ ವ್ಯಾಪ್ತಿಯ ತ್ಯಾಜ್ಯವನ್ನೂ ಬೇರೆ ಬೇರೆಯಾಗಿ ನೀಡಬೇಕಾಗಿದೆ. ಇದರಿಂದ ತ್ಯಾಜ್ಯ ಸಂಗ್ರಹಕ್ಕೆ ಅಡ್ಡಿಯಾಗಿದೆ. ಈಗಾಗಲೇ ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದ್ದು, ಬಕೆಟ್ ವಿತರಿಸಿ ತ್ಯಾಜ್ಯ ವಿಂಗಡಿಸಿ ನೀಡುವಂತೆ ಮನವಿ ಮಾಡಲಾಗುವುದು.
ಕೃಷ್ಣ ನಾಯ್ಕ, ಪಿಡಿಒ, ಅಡ್ಯಾರ್ ಗ್ರಾಪಂ
ಹಸಿ, ಒಣ ಕಸ ಪ್ರತ್ಯೇಕವಾಗಿದ್ದರೆ ಮಾತ್ರ ತ್ಯಾಜ್ಯ ಸ್ವೀಕರಿಸುವಂತೆ ಪಚ್ಚನಾಡಿ ಡಂಪಿಂಗ್ ಯಾರ್ಡ್ ಸಿಬ್ಬಂದಿಗೆ ಪರಿಸರ ಇಲಾಖೆ ಮೂಲಕ ಸೂಚನೆ ನೀಡಲಾಗಿದೆ. ಮಿಶ್ರ ಮಾಡಿ ತಂದ ಲಾರಿಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ಗ್ರಾಪಂಗಳಿಗೂ ಈಗಾಗಲೇ ಮಾಹಿತಿ ರವಾನಿಸಲಾಗಿದ್ದು, ಒಣ-ಹಸಿ ಕಸವನ್ನು ಬೇರೆ ಬೇರೆ ಮಾಡಿಯೇ ತಂದರೆ ಮಾತ್ರ ವಿಲೇವಾರಿಗೆ ಅವಕಾಶ ನೀಡಲಾಗುವುದು.
ಪ್ರೇಮಾನಂದ ಶೆಟ್ಟಿ, ಮೇಯರ್