ಕುಮಾರಧಾರ ಒಡಲಲ್ಲಿ ತ್ಯಾಜ್ಯ

Sub_Kumaradhara
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ನದಿ ಕುಮಾರಧಾರಾ ನದಿಗೆ ಬಟ್ಟೆ ತ್ಯಾಜ್ಯ ಎಸೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಎಸೆದವರಲ್ಲಿ ಪ್ರಶ್ನಿಸಿದರೆ ದರ್ಪದಿಂದ ಉತ್ತರಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಇದರಿಂದಾಗಿ ಕುಮಾರಧಾರಾ ಸೇರಿದಂತೆ ಕ್ಷೇತ್ರಾದ್ಯಂತ ಸ್ವಚ್ಛತೆಗೆ ಎಷ್ಟೇ ಕ್ರಮಕೈಗೊಂಡರೂ ಸ್ವಚ್ಛತೆ ಮಾತು ಇಲ್ಲಿ ದೂರವಾದಂತಿದೆ. ಬಟ್ಟೆ ತ್ಯಾಜ್ಯ ಎಸೆಯುವ ಬಗ್ಗೆ ಭಕ್ತರು ಜಾಗೃತರಾಗಿ ಪವಿತ್ರ ನದಿಯ ಪಾವಿತ್ರೃ ಉಳಿಸುವುದು ಅಗತ್ಯ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಯಾತ್ರಿಕರು ರಾಜ್ಯ, ಹೊರರಾಜ್ಯಗಳಿಂದ ಆಗಮಿಸುತ್ತಾರೆ. ಪುಣ್ಯನದಿ ಕುಮಾರಧಾರಾದಲ್ಲಿ ಸ್ನಾನ ಮಾಡಿ ಬಳಿಕ ದೇವರ ದರ್ಶನ ಪಡೆಯುತ್ತಾರೆ. ಕೆಲವರು ಬಟ್ಟೆ, ತ್ಯಾಜ್ಯ ಎಸೆದು ನದಿಯನ್ನು ಮಲಿನಗೊಳಿಸುತ್ತಿದ್ದಾರೆ. ಜೋತಿಷಿಗಳ ಸಲಹೆ ಮೇರೆಗೆ ಈ ರೀತಿ ಮಾಡುತ್ತಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ನದಿಗೆ ಬಟ್ಟೆ ತ್ಯಾಜ್ಯ ಎಸೆಯದೆ ಜಾಗೃತರಾಗಿ ಪುಣ್ಯ ನದಿಯ ಪಾವಿತ್ರೃ ಕಾಪಾಡುವತ್ತ ಭಕ್ತರು ಗಮನ ಹರಿಸುವುದು ಅಗತ್ಯ. ನೈರ್ಮಲ್ಯ ಕ್ಷೇತ್ರಾಧಿಪನಿಗೆ ಅತ್ಯಂತ ಇಷ್ಟವಾದುದು ಎನ್ನುವುದನ್ನು ಭಕ್ತರು ಮನಗಾಣುವುದು ಒಳಿತು ಎನ್ನುತ್ತಾರೆ ಸುಬ್ರಹ್ಮಣ್ಯದ ಹಿರಿಯರು. *ಸೇತುವೆಯಿಂದಲೇ ನದಿಗೆ ಎಸೆತ : ಕುಮಾರಧಾರಾ ನದಿ ಹಾಗೂ ದರ್ಪಣ ತೀರ್ಥ ನದಿಯ ಸೇತುವೆ ಮೇಲಿಂದ ವಾಹನದಲ್ಲಿ ಬರುವ ಕೆಲವರು ಬಟ್ಟೆ, ತ್ಯಾಜ್ಯ ಎಸೆಯುತ್ತಿದ್ದಾರೆ. ಭಾನುವಾರ ಐಷಾರಾಮಿ ಕಾರಿನಲ್ಲಿ ಬಂದ ವ್ಯಕ್ತಿ ಕಾರನ್ನು ಸೇತುವೆ ಮೇಲೆ ನಿಲ್ಲಿಸಿ ಹಳೇ ಬಟ್ಟೆ-ಬರೆ ನದಿಗೆ ಎಸೆದಿದ್ದಾನೆ. ಅಲ್ಲಿದ್ದವರು ತಡೆಯುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಇದೇ ರೀತಿ ಇಲ್ಲಿ ಘಟನೆಗಳು ನಡೆಯುತ್ತಲೇ ಇರುತ್ತದೆ. ಪ್ರಶ್ನಿಸಿದರೆ ದರ್ಪದ ಉತ್ತರ ಈ ರೀತಿ ತ್ಯಾಜ್ಯ, ಬಟ್ಟೆ ನದಿಗೆ ಎಸೆಯುವ ವೇಳೆ ಸ್ಥಳೀಯರು, ಸಾರ್ವಜನಿಕರು ಪ್ರಶ್ನಿಸಿದರೆ ದರ್ಪದಿಂದ ಉತ್ತರಿಸಿ ಅವರೊಂದಿಗೆ ಜಗಳಕ್ಕೆ ಇಳಿಯುತ್ತಾರೆ. ಯಾರೋ ಜೋತಿಷಿ ತಮ್ಮ ಹಳೆಯ ಬಟ್ಟೆಬರೆಗಳನ್ನು ನದಿಗೆ ಎಸೆಯುವಂತೆ ಹೇಳಿದ್ದಾರೆ ಎಂಬ ಉದ್ಧಟತನದ ಉತ್ತರವನ್ನೂ ನೀಡಿದ್ದಾರೆ. ಆ ವ್ಯಕ್ತಿ ತನ್ನಲ್ಲಿದ್ದ ಹಳೇ ಬಟ್ಟೆಬರೆಗಳ ಮೂರು ಚೀಲಗಳನ್ನು ನದಿಗೆ ಎಸೆದ ಬಳಿಕ ಅಲ್ಲಿದ್ದವರು ಆತನ ಫೋಟೋ ತೆಗೆಯುವಾಗ ಏನೋ ಘನಂದಾರಿ ಕೆಲಸ ಮಾಡಿದಂತೆ ಫೊಟೋಗೆ ಪೋಸ್ ನೀಡಿದ್ದಾನೆ. ಆ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ದೇವಳದಿಂದ ಜಾಗೃತಿ ಕುಮಾರಧಾರಾ ನದಿಗೆ ಬಟ್ಟೆ ಎಸೆಯದಂತೆ ಸ್ನಾನಘಟ್ಟದ ಬಳಿ ಶ್ರೀ ದೇವಳದಿಂದ ವ್ಯಾಪಕ ಜಾಗೃತಿ ಮಾಡಲಾಗುತ್ತಿದೆ. ಫಲಕ ಅಳವಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ಭಕ್ತರಿಗೆ ಮಾಹಿತಿ ನೀಡುತ್ತಾರೆ. ಕುಮಾರಧಾರಾ ಪರಿಸರದಲ್ಲಿ ವಿವಿಧ ಸಂಘ-ಸಂಸ್ಥೆಗಳು ನಿರಂತರವಾಗಿ ಸ್ವಚ್ಛತಾ ಸೇವೆ ನಡೆಸುತ್ತಾ, ಜಾಗೃತಿ ಕಾರ್ಯ ನಡೆಸುತ್ತಿವೆ. ರವಿ ಕಕ್ಕೆಪದವು ಸಮಾಜ ಟ್ರಸ್ಟ್‌ನ ಸದಸ್ಯರು ಈ ಹಿಂದೆ ನಡೆಸಿದ ನದಿ ಸ್ವಚ್ಛತಾ ಶ್ರಮದಾನದ ವೇಳೆ ನದಿಯಲ್ಲಿ ಲೋಡ್‌ಗಟ್ಟಲೆ ಬಟ್ಟೆಬರೆಗಳು ಲಭಿಸಿದ್ದವು. ಬಳಿಕ ದೇಗುಲ, ಸಂಘ-ಸಂಸ್ಥೆಗಳ ಪ್ರಯತ್ನದಿಂದ ನದಿ ಒಡಲಿಗೆ ಬಟ್ಟೆ ಹಾಕುವುದು ಸ್ವಲ್ಪ ಮಟ್ಟಿಗೆ ಕಡಿತವಾಗಿತ್ತು. ಇದೀಗ ಸೇತುವೆ ಮೇಲಿಂದ ಬಟ್ಟೆ ಎಸೆತ ಪ್ರಾರಂಭವಾಗಿದೆ.

ಕುಮಾರಧಾರಾ ಸೇತುವೆ ಮೇಲಿನಿಂದ ನದಿಗೆ ತ್ಯಾಜ್ಯ ಎಸೆಯುವುದನ್ನು ತಡೆಯಲು ಗ್ರಾಪಂ ವತಿಯಿಂದ ಕ್ರಮವಹಿಸಲಾಗುತ್ತದೆ. ಇದನ್ನು ತಡೆಯಲು ಸೇತುವೆಯ ಎರಡು ಬದಿ ನೆಟ್ ಅಳವಡಿಕೆ ಬಗ್ಗೆ ನಿರ್ಧರಿಸಲಾಗಿದೆ. ಆದರೆ ಇದಕ್ಕೆ ಗ್ರಾ.ಪಂ. ಅನುದಾನ ಸಾಕಾಗದೆ ಇರುವುದರಿಂದ ಕುಕ್ಕೆ ಸುಬ್ರಹ್ಮಣ್ಯ ದೇವಳದ ವತಿಯಿಂದ ನೆಟ್ ಅಳವಡಿಕೆಗೆ ಕ್ರಮವಹಿಸಲು ಪತ್ರ ಬರೆಯುವ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸುತ್ತೇವೆ. ಸುಜಾತ ಕಲ್ಲಾಜೆ, ಅಧ್ಯಕ್ಷರು ಗ್ರಾಪಂ ಸುಬ್ರಹ್ಮಣ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net