

ಕುಂದಾಪುರ: ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದ ವಿದ್ಯಾ ದೇಗುಲ ನೇರಂಬಳ್ಳಿ ಪ್ರಾಥಮಿಕ ಶಾಲೆಯೀಗ ತ್ಯಾಜ್ಯ ತುಂಬುವ ಜಾಗವಾಗಿ ಪರಿವರ್ತನೆಯಾಗಿದೆ. ಸ್ಥಳೀಯ ಹಂಗಳೂರು ಗ್ರಾಮ ಪಂಚಾಯಿತಿ ಶಾಲೆಯನ್ನೇ ತ್ಯಾಜ್ಯದ ಕೊಂಪೆ ಮಾಡಿರುವುದಕ್ಕೆ ವಿದ್ಯಾಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಲೆ ಪರಿಸರ ಕೊಠಡಿ ತ್ಯಾಜ್ಯ ತುಂಬಿಸಿದ ಚೀಲಗಳ ರಾಶಿಗಳ ಮೂಟೆ. ಚುನಾಯಿತ ಪಂಚಾಯಿತಿ ಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿ ಸೇರಿ ಶಾಲೆ ಕಸದ ತೊಟ್ಟಿಯನ್ನಾಗಿ ಮಾಡಿಕೊಂಡಿರುವುದು ದುರ್ದೈವ. ಶಿಕ್ಷಣ ಇಲಾಖೆಯನ್ನಾಗಲೀ ಸಂಬಂಧಿಸಿದ ಯಾವುದೇ ಅಧಿಕಾರಿಗಳ ಗಮನಕ್ಕೆ ತಾರದೇ ವಿದ್ಯಾ ದೇಗುಲವನ್ನೇ ಕಸದ ತೊಟ್ಟಿ ಮಾಡಲಾಗಿದೆ.
ಹಿಂದೆ ಶಾಲೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಬರುಬರುತ್ತಾ ವಿದ್ಯಾರ್ಥಿಗಳ ಕೊರತೆಯಿದ್ದೂ ಪ್ರಸಕ್ತ ಶಾಲೆ ಮುಚ್ಚಿದ್ದರೂ ಕಳೆದ ವರ್ಷದ ತನಕ ಅಂಗನವಾಡಿ ನಡೆಯುತ್ತಿತ್ತು. ಅಂಗನವಾಡಿಗೆ ಇತ್ತೀಚೆಗೆ ಬೇರೆ ಕಟ್ಟಡ ಕಟ್ಟಲಾಗಿದೆ. ಬೇರೆ ಬೇರೆ ಕಡೆ ಸರ್ಕಾರಿ ಕನ್ನಡ ಶಾಲೆಗಳ ಉಳಿಸಲು ದತ್ತು ತೆಗೆದುಕೊಳ್ಳುವುದು, ವಾಹನ ವ್ಯವಸ್ಥೆ, ಸಮವಸ್ತ್ರ ಮುಂತಾದ ಸವಲತ್ತುಗಳ ನೀಡಿ ಹಾಜರಾತಿ ಹೆಚ್ಚಿಸುತ್ತಿದ್ದರೆ ಮುಚ್ಚಿದ ಶಾಲೆ ಪುನರಾರಂಭಿಸುವ ಪ್ರಯತ್ನ ಮಾಡದೆ ಶಾಲೆಯನ್ನೇ ತ್ಯಾಜ್ಯ ವಿಲೇವಾರಿ ಘಟಕ ಮಾಡಿದ್ದು ದುರ್ದೈವವೇ ಸರಿ.
ಕುಂದಾಪುರ ತಾಲೂಕು ಘನ ಹಾಗೂ ದ್ರವ ತ್ಯಾಜ್ಯ ಸಂಪನ್ಮೂಲ ನಿರ್ವಹಣೆ ಘಟಕ ಕಟ್ಟಡ ಅಭಿವೃದ್ಧಿಯಲ್ಲಿ 2.52 ಲಕ್ಷ ರೂ. ವೆಚ್ಚದಲ್ಲಿ ಶಾಲಾ ವಠಾರದಲ್ಲಿ ಕಟ್ಟಡ ಕಟ್ಟಿ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಕಟ್ಟಡ ಅಲ್ಲದೆ ಶಾಲಾ ಕಟ್ಟಡದ ಕೊಠಡಿಗಳ ತ್ಯಾಜ್ಯ ಸಂಗ್ರಹಕ್ಕೆ ಬಳಸಿಕೊಳ್ಳಲಾಗುತ್ತದೆ. ಒಟ್ಟಾರೆ ಹಂಗಳೂರು ಪಂಚಾಯಿತಿ ರಾಷ್ಟ್ರೀಯ ಹೆದ್ದಾರಿ ಕೊಚ್ಚೆ ಮಾಡಿದ್ದಲ್ಲದೆ ಶಾಲೆ ಕೂಡಾ ತ್ಯಾಜ್ಯ ಕೊಂಪೆ ಮಾಡಿದ್ದು ದುರಂತ.
ನೇರಂಬಳ್ಳಿ ಶಾಲಾ ಕೊಠಡಿ ಹಾಗೂ ಶಾಲಾ ವಠಾರದಲ್ಲಿ ಕಸ ವಿಲೇವಾರಿ ಇಲಾಖೆ ಗಮನಕ್ಕೆ ತರದೆ ಮಾಡಿದ್ದು, ನಮಗೆ ಅನುಮತಿ ಕೊಡಲು ಬರೋದಿಲ್ಲ. ಪ್ರಸಕ್ತ ನಾನು ಕೋವಿಡ್ ಕೆಲಸದಲ್ಲಿದ್ದ ಕಚೇರಿ ಇಸಿಒವನ್ನು ಸ್ಥಳಕ್ಕೆ ಕಳುಹಿಸಿ, ಸಂಪೂರ್ಣ ವರದಿ ತರಿಸಿಕೊಂಡು ಶಾಲಾ ಅಭಿವೃದ್ಧಿ ಸಮಿತಿ ಕೊಟ್ಟಿದಾರೆ ಎನ್ನುವ ಮಾಹಿತಿ ಪಡೆಯಲಿದ್ದೇನೆ. ತ್ಯಾಜ್ಯ ವಿಲೇ ಗಮನಿಸಿ ಕ್ಲಿಯರ್ ಮಾಡಿಸುತ್ತೇನೆ.
ಎಚ್.ಕೆ.ಪದ್ಮನಾಭ, ವಲಯ ಶಿಕ್ಷಣ ಅಧಿಕಾರಿ, ಕುಂದಾಪುರ