ದಾಸರಹೊಸಹಳ್ಳಿ ಮುಖ್ಯ ರಸ್ತೆಯಲ್ಲಿದ್ದ ತ್ಯಾಜ್ಯ ತೆರವು

FotoJet 1111
Published on

ಬೂದಿಕೋಟೆ: ದಾಸರಹೊಸಹಳ್ಳಿಯ ಮುಖ್ಯ ರಸ್ತೆಯಲ್ಲಿ ಹಾಕಲಾಗಿದ್ದ ಕಸದ ರಾಶಿಯನ್ನು ಪಂಚಾಯಿತಿ ಅಧಿಕಾರಿಗಳು ವಿಲೇವಾರಿ ಮಾಡಿ ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ಕಲ್ಪಿಸಿದ್ದಾರೆ.

ಬಂಗಾರಪೇಟೆ ತಾಲೂಕಿನ ದೊಡ್ಡೂರುಕರಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಹೊಸಹಳ್ಳಿ, ಡಿಕೆ ಹಳ್ಳಿ ಮುಖ್ಯ ರಸ್ತೆ ಸೇರಿ ಹಲವೆಡೆ ಕಸದ ರಾಶಿ ಬಿದ್ದಿದ್ದರಿಂದ ಸುತ್ತಮುತ್ತಲಿನ ಪ್ರದೇಶ ದುರ್ನಾತ ಬೀರುತ್ತಿತ್ತು. ಜತೆಗೆ ಸಾಂಕ್ರಾಮಿಕ ರೋಗಗಳ ಉಗಮಕ್ಕೆ ಸೂಕ್ತ ಸ್ಥಾನವಾಗಿ ಮಾರ್ಪಟ್ಟಿತ್ತು. ಈ ಬಗ್ಗೆ ಆ.26ರಂದು ವಿಜಯವಾಣಿಯಲ್ಲಿ "ಪ್ರಯೋಜನಕ್ಕೆ ಬಾರದ ವಿಲೇವಾರಿ ಘಟಕ' ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿತ್ತು. ವರದಿಯಿಂದ ಎಚ್ಚೆತ್ತ ಪಂಚಾಯಿತಿ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯ ರಸ್ತೆ, ಸಾರ್ವಜನಿಕ ಸ್ಥಳಗಳು ಸೇರಿ ಎಲ್ಲೆಡೆ ಸ್ವಚ್ಛಗೊಳಿಸಿ ಕಸದ ರಾಶಿ ತೆರವು ಮಾಡಿದ್ದಾರೆ.

ಪಿಡಿಒ ಕೆ.ಎಂ ವೇಣು ಮಾತನಾಡಿ, ಪಂಚಾಯಿತಿ ವ್ಯಾಪ್ತಿ ದೊಡ್ಡದಾಗಿರುವುದರಿಂದ ಪ್ರತಿ ದಿನ ಆಟೋ ಮತ್ತು ಟ್ರಾ$್ಯಕ್ಟರ್​ ಮೂಲಕ ಮನೆ ಮನೆಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಈಗಾಗಲೇ ಪಂಚಾಯಿತಿಯಿಂದ ಎಲ್ಲರಿಗೂ ಒಣಕಸ, ಹಸಿಕಸ ವಿಂಗಡಣೆ ಮಾಡಿ ಹಾಕಲು ಎರಡು ಬುಟ್ಟಿಗಳನ್ನು ವಿತರಣೆ ಮಾಡಲಾಗಿದೆ. ಅದರಂತೆ ಬಹುತೇಕ ಜನರು ಕಸ ವಿಂಗಡಣೆ ಮಾಡಿ ತಮ್ಮ ಮನೆಯ ಮುಂದೆ ಬರುವ ಕಸದ ವಾಹನಗಳಿಗೆ ಕಸ ಹಾಕುವ ಕಾಯಕ ಪಾಲನೆ ಮಾಡುತ್ತಿದ್ದಾರೆ. ಆದರೆ, ಕೆಲವರು ಕಸದ ವಾಹನಗಳು ಬಂದಾಗ ಮನೆಯಲ್ಲಿ ಇಲ್ಲದ ಕಾರಣ ಕೆಲಸಕ್ಕೆ ಹೋಗುವ ಸಮಯದಲ್ಲಿ ಮಾರ್ಗ ಮಧ್ಯೆ ಕಸ ಎಸೆದು ಹೋಗುತ್ತಿದ್ದಾರೆ. ಇದರಿಂದ ಕಸದ ರಾಶಿ ಹೆಚ್ಚಾಗುತ್ತದೆ. ಪಂಚಾಯಿತಿಯಿಂದ ಸ್ವಚ್ಛಗೊಳಿಸಿದರೂ ಸಾರ್ವಜನಿಕರು ಮತ್ತೆ ಮತ್ತೆ ಕಸ ಹಾಕಿ ಅನೈರ್ಮಲ್ಯ ಉಂಟು ಮಾಡುತ್ತಿದ್ದಾರೆ. ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಕೇವಲ ಪಂಚಾಯಿತಿ ಮಾತ್ರ ಅಗತ್ಯ ಕ್ರಮಗಳನ್ನು ಕೈಗೊಂಡರೆ ಸಾಲದು. ಜತೆಗೆ ಸಾರ್ವಜನಿಕರ ಸಹಕಾರವೂ ಮುಖ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net