ಏ.1ರಿಂದ ಆಸ್ತಿತೆರಿಗೆ ಜತೆ ತ್ಯಾಜ್ಯ ಶುಲ್ಕ ವಸೂಲು

bbmp office
Published on

ಬೆಂಗಳೂರು: ಮಹಾನಗರದಲ್ಲಿ ಮನೆ ಮನೆಯಿಂದ ಸಂಗ್ರಹಿಸುವ ಘನತ್ಯಾಜ್ಯಕ್ಕೆ ಬಳಕೆದಾರರಿಂದ ಸೇವಾ ಶುಲ್ಕ ವಸೂಲು ಮಾಡಲು ಬಿಬಿಎಂಪಿ ಮುಂದಾಗಿದೆ. ಪಾಲಿಕೆಯ ಹಳೆಯ ಪ್ರಸ್ತಾಪಕ್ಕೆ ಸರ್ಕಾರ ಒಪ್ಪಿಗೆ ನೀಡಿರುವುದರಿಂದ ಏ.1ರಿಂದ ಸಂಗ್ರಹಿಸಲಾಗುವ ಆಸ್ತಿತೆರಿಗೆಯಲ್ಲಿ ಹೊಸದಾಗಿ ಶುಲ್ಕವನ್ನು ಆಸ್ತಿದಾರರು ಪಾವತಿಸಬೇಕಿದೆ.

ಈ ಶುಲ್ಕವು ಕಟ್ಟಡದ ವಿಸ್ತೀರ್ಣ ಆಧರಿಸಿ ವಸೂಲು ಮಾಡಲಾಗುತ್ತದೆ. 600 ಚದರ ಅಡಿ ವಿಸ್ತೀರ್ಣಕ್ಕಿಂತ ಕಡಿಮೆ ಇರುವ ಮನೆಗೆ ಮಾಸಿಕ 10 ರೂ. ಪಾವತಿಸಬೇಕಿದ್ದು, ವಾರ್ಷಿಕ 120 ರೂ. ತೆರಬೇಕಿದೆ. ಇದೇ ರೀತಿ ಕಟ್ಟಡದ ವಿಸ್ತೀರ್ಣ ಆಧರಿಸಿ ಶುಲ್ಕ ತೆರಬೇಕಿರುವುದರಿಂದ ದೊಡ್ಡ ಮನೆಗಳ (4000 ಚ. ಅಡಿ) ಮಾಲೀಕರು ಮಾಸಿಕ 400 ರೂ. ರಂತೆ ವಾರ್ಷಿಕ 4,800 ರೂ. ಪಾವತಿಸಬೇಕಾಗುತ್ತದೆ. ಇದು ಪರೋಕ್ಷವಾಗಿ ಆಸ್ತಿತೆರಿಗೆ ಹೆಚ್ಚಳ ತೆರಿಗೆದಾರರ ಮೇಲೆ ಬೀಳಲಿದೆ.

ಪ್ರಸ್ತುತ ನಗರದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (ಬಿಎಸ್‌ಡಬ್ಲ್ಯುಎಂಎಲ್) ಕರ ಸಂಗ್ರಹ ಹಾಗೂ ವಿಲೇವಾರಿ ಹೊಣೆ ಹೊತ್ತಿದೆ. ಈ ಸಂಸ್ಥೆ ನೇರವಾಗಿ ನಾಗರಿಕರಿಂದ ಶುಲ್ಕ ವಸೂಲು ಮಾಡಲು ಸಾಧ್ಯವಾಗದ ಕಾರಣ ಆಸ್ತಿತೆರಿಗೆಯೊಂದಿಗೆ ಸೇರಿಸಿ ವಸೂಲು ಮಾಡಲು ಅವಕಾಶ ಕಲ್ಪಿಸಿ ನಗರಾಭಿವೃದ್ಧಿ ಇಲಾಖೆ ಅನುಮತಿ ನೀಡಿದೆ.

ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಘನತ್ಯಾಜ್ಯ ಶುಲ್ಕ ವಸೂಲು ಮಾಡುವಂತೆ ಪಾಲಿಕೆಯ 2015ರ ಬೈಲಾದಲ್ಲೇ ಅಡಕಗೊಳಿಸಲಾಗಿದೆ. ಆದರೆ, ಈವರೆಗೂ ಜಾರಿಗೆ ತಂದರಿರಲಿಲ್ಲ. 2025-26ನೇ ಸಾಲಿನಿಂದ ಅಧಿಕೃತವಾಗಿ ಜಾರಿಗೆ ತರಲಿದ್ದು, ಸರ್ಕಾರದ ಒಪ್ಪಿಗೆ ಪಡೆಯಲಾಗಿದೆ. ಆಸ್ತಿದಾರರು ಈ ಶುಲ್ಕವನ್ನು ವರ್ಷದಲ್ಲಿ ಎರಡು ಬಾರಿ ಪಾವತಿಸಲು ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.

4,604 ಕೋಟಿ ರೂ. ಆಸ್ತಿತೆರಿಗೆ ಸಂಗ್ರಹ:

ಪಾಲಿಕೆಯು 2024-25ನೇ ಸಾಲಿನಲ್ಲಿ 5,210 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಿತ್ತು. ಈವರೆಗೆ 4,604 ಕೋಟಿ ರೂ. (ಶೇ.88.36) ಸಂಗ್ರಹಿಸಿ ದಾಖಲೆ ಮಾಡಿದ್ದು, ಹಾಲಿ ಆರ್ಥಿಕ ವರ್ಷದ ಉಳಿದ 15 ದಿನಗಳಲ್ಲಿ ಇನ್ನೂ 150 ಕೋಟಿ ರೂ. ಸಂಗ್ರಹಿಸುವ ನಿರೀಕ್ಷೆ ಹೊಂದಲಾಗಿದೆ. ಬಿಬಿಎಂಪಿಯ ಎಂಟೂ ವಲಯಗಳಲ್ಲಿ ಮಹದೇವಪುರದಲ್ಲಿ ಅತಿ ಹೆಚ್ಚು 1,223.30 ಕೋಟಿ ರೂ. ಸಂಗ್ರಹಿಸಲಾಗಿದೆ. ಶೇಕಡವಾರು ಲೆಕ್ಕದಲ್ಲಿ ಯಲಹಂಕ ವಲಯವು ಶೇ.99.97 (445.15 ಕೋಟಿ ರೂ.) ಸಾಧನೆ ಮಾಡಿದೆ.

ಬಾಕಿ ತೆರಿಗೆ ವಸೂಲಿಗೆ ಸೂಚನೆ:

ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸ್ವತ್ತುದಾರರಿಂದ ಈ ತಿಂಗಳ 30ಒಳಗೆ ಟ್ಯಾಕ್ಸ್ ಸಂಗ್ರಹಿಸುವಂತೆ ಪಾಲಿಕೆಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ವಲಯಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶನಿವಾರ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು 2024-25ನೇ ಆರ್ಥಿಕ ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾಗಿ ಈ ತಿಂಗಳಾಂತ್ಯದೊಳಗೆ ಬಾಕಿಯಿರುವ ಆಸ್ತಿ ತೆರಿಗೆಯನ್ನು ತಕ್ಷಣವೇ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಹೆಚ್ಚು ಆಸ್ತಿತೆರಿಗೆ ಉಳಿಸಿಕೊಂಡಿರುವ ಸಂಸ್ಥೆ, ಉದ್ದಿಮೆಗಳಿಗೆ ಭೇಟಿ ನೀಡಿ ಬಾಕಿ ತೆರಿಗೆಯನ್ನು ವಸೂಲಿ ಮಾಡುವಂತೆ ಸೂಚನೆ ನೀಡಿದ್ದಾರೆ.

ವಲಯವಾರು ಆಸ್ತಿತೆರಿಗೆ ಸಂಗ್ರಹದ ವಿವರ (ಕೋಟಿ ರೂ.ಗಳಲ್ಲಿ):

ವಲಯ ತೆರಿಗೆ ಗುರಿ ಸಂಗ್ರಹ ಶೇಕಡವಾರು

ಪೂರ್ವ 89.89 770.56 86.39

ಪಶ್ಚಿಮ 610.39 517.07 93.55

ದಕ್ಷಿಣ 769.50 664.67 86.37

ಮಹದೇವಪುರ 1309.04 1223.30 93.45

ಬೊಮ್ಮನಹಳ್ಳಿ 585.11 468.48 80.06

ಯಲಹಂಕ 445.24 445.15 99.97

ದಾಸರಹಳ್ಳಿ 164.95 148.12 89.79

ಆರ್‌ಆರ್‌ನಗರ 434.35 367.08 84.51

ಬಿಬಿಎಂಪಿ ಪ್ರತೀ ವರ್ಷ ಆಸ್ತಿತೆರಿಗೆ ಅಡಿಯಲ್ಲಿ ಕಸಕ್ಕೆ ಕರ ವಸೂಲು ಮಾಡುತ್ತಿದೆ. ಇದರ ಜತೆಗೆ ಹೊಸದಾಗಿ ಬಳಕೆದಾರರ ಶುಲ್ಕವನ್ನು ವಸೂಲು ಮಾಡಲು ಹೊರಟಿರುವುದು ಕಾನೂನುಬಾಹಿರ. ಒಂದೇ ವಿಷಯಕ್ಕೆ ಎರಡೆರಡು ಬಾರಿ ತೆರಿಗೆ ಪಾವತಿಸುವುದು ಯಾವ ನ್ಯಾಯ. ಸಮರ್ಪಕವಾಗಿ ಕಸ ಸಂಗ್ರಹಿಸದ ಪಾಲಿಕೆ ಈ ನಿರ್ಧಾರವನ್ನು ಕೈಬಿಡಲಿ.

- ಹರೀಶ್, ಸ್ವಂತ ಉದ್ಯೋಗಿ, ಕೊಡಿಗೇಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net