ಪಾಂಡವಪುರ ಎಸಿಗೆ ವಾರೆಂಟ್ ಜಾರಿ

court
Published on

ಶ್ರೀರಂಗಪಟ್ಟಣ: ಕಾವೇರಿ ನದಿ ತೀರ ಒತ್ತುವರಿ ಮಾಡಿ ಅಕ್ರಮ ರೆಸಾರ್ಟ್ ಮತ್ತು ಹೋಂಸ್ಟೇಗಳ ನಿರ್ಮಾಣ ಕುರಿತ ಸಂಬಂಧಪಟ್ಟ ವರದಿಯನ್ನು ಲೋಕಾಯುಕ್ತ ಕಚೇರಿಗೆ ಸಲ್ಲಿಸದ ಹಿನ್ನೆಲೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ವಿರುದ್ಧ ಉಪಲೋಕಾಯುಕ್ತ ಕಚೇರಿಯಿಂದ ವಾರೆಂಟ್ ಜಾರಿಯಾಗಿದೆ.

ಪಟ್ಟಣ ಹೊರವಲಯದ ಚಂದ್ರವನದಲ್ಲಿನ ಬಂಗಾರದೊಡ್ಡಿ ಅಣೆಕಟ್ಟೆ ಪ್ರದೇಶ ಹಾಗೂ ನಾಲೆಯ ಮುಂಭಾಗದ ಕಾವೇರಿ ನದಿ ಖರಾಬು ಭೂಮಿ ಸೇರಿದಂತೆ ಸಂರಕ್ಷಿತ ವಲಯದ ಕೃಷಿ ಭೂಮಿಗಳಲ್ಲಿ ಪರವಾನಗಿ ಇಲ್ಲದೆ ಅಕ್ರಮ ರೆಸಾರ್ಟ್ ಮತ್ತು ಹೋಂಸ್ಟೇಗಳ ಕಟ್ಟಡಗಳನ್ನು ನಿರ್ಮಿಸಿಕೊಂಡು ವಾಣಿಜ್ಯ ಚಟುವಟಿಕೆಗಳ ನಡೆಸುತ್ತಿದ್ದ ಸಂಬಂಧ ಆರೋಪವಿದ್ದ ಹಿನ್ನೆಲೆಯಲ್ಲಿ ಕೆಲತಿಂಗಳ ಹಿಂದೆ ಖುದ್ದು ಉಪಲೋಕಯುಕ್ತರೇ ಭೇಟಿ ನೀಡಿ, ಪರಿಶೀಲಿಸಿ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಸಂಬಂಧ ವರದಿ ನೀಡುವಂತೆ ತಾಲೂಕು ಆಡಳಿತ ಮತ್ತು ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ್ದರು.

ಅದರಂತೆ ಕೆಲ ದಿನಗಳ ಹಿಂದೆ ಕೇವಲ ನದಿ ತೀರದಲ್ಲಿ ಮಾತ್ರ ರೆಸಾರ್ಟ್ ಮಾಲೀಕರ ಅನುಕೂಲಕ್ಕೆ ತಕ್ಕಂತೆ ಮಾತ್ರ ತಾಲೂಕು ಆಡಳಿತ ಬೇಕಾಬಿಟ್ಟಿ ತೆರವು ಮಾಡಿ, ಅಕ್ರಮ ಕಟ್ಟಡಗಳನ್ನು ಹಾಗೆಯೇ ಉಳಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕುರಿತು ಸಂಬಂಧಪಟ್ಟ ವರದಿಯನ್ನು ಸಕಾಲದಲ್ಲಿ ಸಲ್ಲಿಸದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಗೊಳಿಸಲಾಗಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net