

ಮಡಿಕೇರಿ:
ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕೊಡಗು ಎಸ್‌ಪಿ ಕೆ. ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ. ವಿರಾಜಪೇಟೆ - ಪಿರಿಯಾಪಟ್ಟಣ - ಹುಣಸೂರು ಮಾರ್ಗದಲ್ಲಿ ದರೋಡೆ ಪ್ರಕರಣ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ಹರಡುತ್ತಿರುವ ವಿಡಿಯೋದಲ್ಲಿ ಇರುವ ಮಾಹಿತಿ
ಸುಳ್ಳು ಎಂದು ಸ್ಪಷ್ಟನೆ ನೀಡಿರುವ ಎಸ್‌ಪಿ., ಈ ರಸ್ತೆಯಲ್ಲಿ ಮುಳ್ಳು ತಂತಿ ಇರಿಸಿ ವಾಹನಗಳನ್ನು ರಾತ್ರಿ ವೇಳೆ ತಡೆದು ದರೋಡೆ ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿತ್ತು. ಇಂಥ ಪ್ರಕರಣ ನಡೆದಿಲ್ಲ. ಸಾರ್ವಜನಿಕರು ಯಾವುದೇ ಆತಂಕಕ್ಕೊಳಗಾಗುವುದು ಬೇಡ ಎಂದು ಎಸ್ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಮು ಸೌಹಾರ್ದತೆ ಹದಗೆಡಿಸುವ ಯಾವುದೇ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು. ಇವುಗಳ ಮೇಲೆ ಕೊಡಗು ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಿದೆ. ಸುಳ್ಳು ಸುದ್ದಿ ಹರಡುವುದು, ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಅಪಪ್ರಚಾರ ಕೈಗೊಳ್ಳುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.