ಬಿಡಾಡಿ ದನಗಳ ಮಾಲೀಕರಿಗೆ ಎಚ್ಚರಿಕೆ

dvd cattels
ದೇವದುರ್ಗ ತಾಲೂಕು ಜಾಲಹಳ್ಳಿಯಲ್ಲಿ ರಾಜ್ಯ ಹೆದ್ದಾರಿ ಮಧ್ಯ್ಲೆನಿಂತಿರುವ ಬಿಡಾಡಿ ದನಗಳು.
Published on

ದೇವದುರ್ಗ: ತಾಲೂಕಿನ ಜಾಲಹಳ್ಳಿಯಲ್ಲಿ ಬಿಡಾಡಿ ದಿನಗಳ ಹಾವಳಿ ಹೆಚ್ಚಾಗಿದ್ದರಿಂದ ಪೊಲೀಸ್ ಇಲಾಖೆ ಹಾಗೂ ಗ್ರಾಪಂ ಜಂಟಿ ಕಾರ್ಯಾಚರಣೆ ನಡೆಸಲು ಮುಂದಾಗಿವೆ. ಇದರ ಭಾಗವಾಗಿ ಎರಡು ದಿನಗಳಿಂದ ಡಂಗುರ ಸಾರುತ್ತಿದ್ದು, ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.

ಪಟ್ಟಣದ ರಾಜ್ಯ ಹೆದ್ದಾರಿ, ಬಸ್ ನಿಲ್ದಾಣ, ಪೊಲೀಸ್ ಠಾಣೆ ಆವರಣ ಸೇರಿ ವಿವಿಧೆಡೆ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಹಲವು ಸಂದರ್ಭಗಳಲ್ಲಿ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಕೆಲವೆಡೆ ಅಪಘಾತಗಳು ನಡೆದಿವೆ. ಈ ಬಗ್ಗೆ ಹಲವು ಸಲ ವಾಹನ ಸವಾರರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಲ್ಲದೆ ಹಣ್ಣು, ತರಕಾರಿ ಸೇರಿ ವಿವಿಧ ವ್ಯಾಪಾರಿಗಳು ದೂರು ಸಲ್ಲಿಸಿದ್ದರು.

ಮುಂಗಾರು ಆರಂಭವಾಗಿದ್ದು ಪಟ್ಟಣದ ಸುತ್ತಮುತ್ತ ಬಿತ್ತನೆ ಕಾರ್ಯ ನಡೆಯುತ್ತಿವೆ. ಬಿಡಾಡಿ ದನಗಳಿಂದ ಬೇಸತ್ತ ರೈತರು ಪೊಲೀಸ್ ಠಾಣೆಗೆ ಇತ್ತೀಚೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸ್ಥಳೀಯ ಗ್ರಾಪಂಯಿಂದ ಬುಧವಾರ ಡಂಗುರ ಸಾರಿ ಎಚ್ಚರಿಕೆ ನೀಡಿದೆ. ಮಾಲೀಕರಿಗೆ ನಾಲ್ಕು ದಿನಗಳ ಗಡುವು ನೀಡಿದ್ದು ನಿಯಂತ್ರಣ ಮಾಡದಿದ್ದರೆ ಜಂಟಿ ಕಾರ್ಯಾಚರಣೆ ನಡೆಸಿ ಬಿಡಾಡಿ ದನಗಳನ್ನು ಸೆರೆಹಿಡಿದು ರಾಯಚೂರಿನ ಗೋಶಾಲೆಗೆ ಬಿಡಲು ತೀರ್ಮಾನಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net