

ಉಡುಪಿ: ವಿದೇಶದಿಂದ ಬಂದ ವ್ಯಕ್ತಿಗಳು ಆರೋಗ್ಯ ಇಲಾಖೆಯ ಸ್ಥಳೀಯ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರ ಬಳಿ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ, ಕರೊನಾ ನಿಯಂತ್ರಣ ಕುರಿತ ಕಾರ್ಯದಲ್ಲಿ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಗುರುವಾರ ಕರೊನಾ ನಿಯಂತ್ರಣ ಸಭೆಯಲ್ಲಿ ಅವರು, ಜಿಲ್ಲೆಯಲ್ಲಿ ಫೆಬ್ರವರಿ 25ರ ಬಳಿಕ ವಿದೇಶಗಳಿಂದ ಆಗಮಿಸಿರುವ ಸಾರ್ವಜನಿಕರು ಸ್ವಯಂಘೋಷಣೆ ಮಾಡಿಕೊಳ್ಳಬೇಕು. ವಿದೇಶದಿಂದ ಬಂದವರ ಬಗ್ಗೆ ಸಾರ್ವಜನಿಕರೂ ಮಾಹಿತಿ ನೀಡಬಹುದು. ಮಾಹಿತಿ ನೀಡಿದವರ ಹಾಗೂ ಶಂಕಿತ ವ್ಯಕ್ತಿಯ ಗುರುತು ಗೌಪ್ಯವಾಗಿ ಇಡಲಾಗುವುದು. ವಿದೇಶಗಳಿಗೆ ಭೇಟಿ ನೀಡಿದವರು 14 ದಿನ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ, ಮನೆಯಲ್ಲಿಯೇ ಪ್ರತ್ಯೇಕವಾಗಿರಬೇಕು ಎಂದು ತಿಳಿಸಿದರು.
ಇಲಾಖೆ ವಾಹನ ಲಭ್ಯ: ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಯಿದ್ದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕದ ದೂ.ಸಂ. 0820-2525561ಗೆ ಮಾಹಿತಿ ನೀಡಬೇಕು. ವೈದ್ಯಕೀಯ ಪರೀಕ್ಷೆಗೆ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿರುವ ಸುಸಜ್ಜಿತ ವಾಹನದಲ್ಲಿಯೇ ಆಗಮಿಸಬೇಕು, ಬೇರೆ ವಾಹನದಲ್ಲಿ ಬರಕೂಡದು ಎಂದು ಡಾ.ಸುಧೀರ್ ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಆಶ್ರಿತ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್, ಆರ್.ಸಿ.ಎಚ್ ಅಧಿಕಾರಿ ಡಾ. ಎಂ.ಜಿ.ರಾಮ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಸತೀಶ್ ರಾವ್, ಜಿಲ್ಲಾ ಕರೊನಾ ನಿಯಂತ್ರಣ ಕಾರ್ಯಪಡೆಯ ಸದಸ್ಯ ಡಾ. ತೇಜಸ್ವಿನಿ, ಪ್ರೀತಮ್, ಗಿರೀಶ್ ಕಡ್ಡೀಪುಡಿ ಉಪಸ್ಥಿತರಿದ್ದರು.
ಸಾಗರದ ಮಹಿಳೆಗೆ ಸೋಂಕು ಇಲ್ಲ:
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಕರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಾಗರ ತಾಲೂಕಿನ ಮಹಿಳೆಯಲ್ಲಿ ಈ ರೋಗದ ಸೋಂಕು ಇಲ್ಲ ಎಂದು ವೈದ್ಯಕೀಯ ವರದಿ ಬಂದಿದೆ. ಮಹಿಳೆ ವಯೋಸಹಜ ಇತರೆ ಆರೋಗ್ಯ ಸಮಸ್ಯೆಗಳಿಂದ ದಾಖಲಾಗಿದ್ದಾರೆ ಎಂದು ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.