ಬರಗೂರರ ಶಬರಿಯಲ್ಲಿ ಪ್ರತಿರೋಧದ ಎಚ್ಚರಿಕೆ

Published on

ಬಳ್ಳಾರಿ ; ಬುಡಕಟ್ಟು ಆದಿವಾಸಿ ಸಮುದಾಯದ ಮಹಿಳೆಯರ ಅನಾಥ ಪ್ರಜ್ಞೆ , ಸಂಕಷ್ಟ, ಪ್ರತಿರೋಧದ ಎಚ್ಚರಿಕೆಯನ್ನು ಬರಗೂರರ ಶಬರಿಯಲ್ಲಿ ಕಾಣಲು ಸಾಧ್ಯ ಎಂದು ಗಂಗಾವತಿಯ ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಮುಮ್ತಾಜ್ ಬೇಗಂ ಅಭಿಪ್ರಾಯಪಟ್ಟರು.

ನಗರದ ಸರಳಾದೇವಿ ಸರ್ಕಾರಿ ಪದವಿ ಕಾಲೇಜಿನ ಸಭಾಂಗಣದಲ್ಲಿ ಕನ್ನಡ ವಿಭಾಗದ ವತಿಯಿಂದ ಆಯೋಜಿಸಿದ್ದ ‘ ಬರಗೂರು ರಾಮಚಂದ್ರಪ್ಪ ಅವರ ಕಾದಂಬರಿ ಶಬರಿ ಕುರಿತು ' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮಾಯಣದ ಶಬರಿಗೂ ಈ ಕಾದಂಬರಿಯ ಶಬರಿಗೂ ಸಾಮ್ಯತೆಗಳಿವೆ. ಅಲ್ಲಿ ಭಕ್ತಿ ಪ್ರಧಾನವಾದರೆ ಇಲ್ಲಿ ಮುಕ್ತಿ ಪ್ರಧಾನವಾಗಿದೆ. ಶಬರಿ ಶೋಷಣೆಯ ಮತ್ತು ಶ್ರಮ ಸಂಸ್ಕೃತಿಯ ಕೇಂದ್ರವಾಗಿ ಚಿತ್ರಣಗೊಂಡಿದ್ದಾಳೆ. ಕಾದಂಬರಿಯುದ್ದಕ್ಕೂ ಬೆವರಿನ ಸಂಸ್ಕೃತಿ ಮತ್ತು ಭೂಮಿ ತತ್ವದ ನಿಲುವುಗಳಿವೆ. ಇಲ್ಲಿನ ಕಥಾನಾಯಕಿ ತನ್ನ ಇರುವಿಕೆಗಾಗಿ, ಸಮಾಜದ ವಿಮೋಚನೆಗಾಗಿ ಹಂಬಲಿಸುತ್ತಲೇ ಆತ್ಮಸ್ಥೈರ್ಯದಿಂದ ಬದುಕನ್ನು ಕಟ್ಟಿಕೊಂಡಿರುವ ದಿಟ್ಟೆ. ನೆಲ, ಕಾಡು, ಸಂಸ್ಕೃತಿಯೊಂದಿಗೆ ಆಕೆಯ ಬದುಕು ಹಾಸುಹೊಕ್ಕಾಗಿದೆ ಎಂದು ವಿಶ್ಲೇಷಿಸಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರೊ. ಡಾ. ಸಿ.ಕೊಟ್ರೇಶ ಮಾತನಾಡಿ, ಸ್ತ್ರೀವಾದಿ ನೆಲೆಯ ಆಶಯಗಳನ್ನು ಬರಗೂರರು ಇಲ್ಲಿನ ಸ್ತ್ರೀ ಪಾತ್ರಗಳ ಮೂಲಕ ಅನಾವರಣಗೊಳಿಸಿದ್ದಾರೆ. ಬಹುತ್ವದ ಚಿಂತನೆಯನ್ನು ಎತ್ತಿ ಹಿಡಿದಿದ್ದಾರೆ ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ

ಡಾ.ಹೊನ್ನೂರಾಲಿ ಮಾತನಾಡಿ, ಬುಡಕಟ್ಟು ಸಮುದಾಯಗಳ ಸಮಸ್ಯೆ,ಸಂಕಟಗಳು ಇಂದಿಗೂ ಬದಲಾಗಿಲ್ಲ. ಹಲವು ಬಗೆಯ ಬಿಕ್ಕಟ್ಟು,ಸವಾಲುಗಳನ್ನು ಎದುರಿಸುವ ಸಮುದಾಯಗಳನ್ನು ಅಕ್ಷರದ ಅರಿವಿನಿಂದ ಮುಖ್ಯ ವಾಹಿನಿಗೆ ಕರೆದುಕೊಂಡು ಬರುವ ಅಗತ್ಯ ತುಂಬಾ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net