ಹದಗೆಟ್ಟ ರಸ್ತೆ ದುರಸ್ತಿ ಕೈಕೊಳ್ಳದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

MDK08
Published on

ಮಡಿಕೇರಿ: ಮಡಿಕೇರಿ ನಗರದ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಆಟೋಗಳನ್ನು ಚಾಲಿಸುವುದೇ ಕಷ್ಟ ಸಾಧ್ಯವಾಗಿದೆ. ಶೀಘ್ರ ದುರಸ್ತಿ ಕಾರ್ಯ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಕೊಡಗು ಜಿಲ್ಲಾ ಮತ್ತು ಮಡಿಕೇರಿ ನಗರ ಆಟೋ ಚಾಲಕರ ಸಂಘ ಎಚ್ಚರಿಕೆ ನೀಡಿದೆ.


ನಗರಸಭಾ ಅಧ್ಯಕ್ಷೆ ಅನಿತಾಪೂವಯ್ಯ ಹಾಗೂ ಪೌರಾಯುಕ್ತ ವಿಜಯ್‌ರವರಿಗೆ ಗುರುವಾರ ಮನವಿ ಪತ್ರ ಸಲ್ಲಿಸಿದ ಆಟೋಚಾಲಕರು ನಗರಸಭೆಯ ಆಡಳಿತ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.


ನಗರದ ಎಲ್ಲಾ ರಸ್ತೆಗಳು ಹದಗೆಟ್ಟು ವರ್ಷಗಳೇ ಕಳೆದಿದ್ದರೂ ದುರಸ್ತಿ ಪಡಿಸಲು ಕಾಳಜಿ ತೋರುತ್ತಿಲ್ಲ. ನಿತ್ಯ ದುಡಿದು ತಿನ್ನುವ ಆಟೋ ಚಾಲಕರು ಗುಂಡಿ ಬಿದ್ದ ರಸ್ತೆಗಳಲ್ಲಿ ಆಟೋಗಳನ್ನು ಚಾಲಿಸಿ ನಷ್ಟ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.


ದೇಚೂರು, ಓಂಕಾರೇಶ್ವರ ದೇವಾಲಯ, ಚಾಮುಂಡೇಶ್ವರಿ ನಗರ, ಇಂದಿರಾನಗರ, ಭಗವತಿ ನಗರ, ಕನ್ನಂಡಬಾಣೆ, ಗೌಳಿಬೀದಿ, ರಾಜಾಸೀಟು, ಕಾಲೇಜು ರಸ್ತೆ ಸೇರಿದಂತೆ ಅನೇಕ ಬಡಾವಣೆಗಳ ರಸ್ತೆಗಳು ಹೊಂಡ ಗುಂಡಿಗಳಿದ ಕೂಡಿವೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.


ಆಟೋ ಮಾಲೀಕ, ಚಾಲಕರ ಸಂಘದ ಜಿಲ್ಲಾಧ್ಯಕ್ಷ ಡಿ.ಎಚ್.ಮೇದಪ್ಪ, ಮಡಿಕೇರಿ ಸಂಘದ ಅಧ್ಯಕ್ಷ ಎ.ಅರುಣ್ ಕುಮಾರ್, ಪ್ರದಾನ ಕಾರ್ಯದರ್ಶಿ ಬಾರನ ದಿನೇಶ್, ಖಜಾಂಚಿ ದಿನೇಶ್ ಶೆಟ್ಟಿ, ಪದಾಧಿಕಾರಿಗಳಾದ ಭರತ್ ಕುಮಾರ್, ಹೇಮರಾಜ್, ಸುಕುಮಾರ್, ಸುನಿಲ್, ರೋಹಿತ್, ರೋನಿ, ಮೋಹನ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net