ಮೈಸೂರು: ಅನುದಾನಿತ ಶಾಲಾ ಶಿಕ್ಷಕರ ಪಿಂಚಣಿ ಬಿಡುಗಡೆ ಮಾಡದಿದ್ದರೆ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ಕಾರ್ಯಾಧ್ಯಕ್ಷ ರಾಜ್‌ಗೋಪಾಲ್ ಎಚ್ಚರಿಕೆ ನೀಡಿದರು.
ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘ ಮೈಸೂರು ಜಿಲ್ಲಾ ಘಟಕದಿಂದ ನಗರದ ಡಿ.ಬನುಮಯ್ಯ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 2023ರ ಚುನಾವಣಾ ಪ್ರಣಾಳಿಕೆಯಂತೆ ಸರ್ಕಾರ ಪಿಂಚಣಿ ವಂಚಿತರಿಗೆ ಪಿಂಚಣಿ ಜಾರಿಗೊಳಿಸಬೇಕು ಎಂಬ ಆಗ್ರಹ ಹಾಗೂ ಜಿಲ್ಲಾ ಸಂಘದ ಬಲವರ್ಧನೆಗಾಗಿ ಜಾಗೃತಿಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಅನುದಾನಿತ ಶಾಲಾ ಶಿಕ್ಷಕರ ಪಿಂಚಣಿ ಬಿಡುಗಡೆ ಮಾಡಿದರೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕೃತಜ್ಞತಾ ಸಮಾವೇಶ ಮಾಡುತ್ತೇವೆ. ತಪ್ಪಿದಲ್ಲಿ ಅದೇ ಸ್ಥಳದಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದರು.
2006ರಿಂದ ಅನುದಾನಿತ ಶಾಲಾ ಶಿಕ್ಷಕರಿಗೆ ಸೂಕ್ತ ರೀತಿಯಲ್ಲಿ ಸರ್ಕಾರದ ಸವಲತ್ತುಗಳು ಸಿಗದೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿವೃತ್ತಿಯ ನಂತರದಲ್ಲಿ ಆರ್ಥಿಕ ಬಲವಿಲ್ಲದೇ ಸಂಕಷ್ಟದ ಬದುಕು ದೂಡುವಂತಾಗಿದೆ ಎಂದು ದೂರಿದರು.
ಅಂದಿನಿಂದ ಪಿಂಚಣಿಗಾಗಿ ಹೋರಾಟಗಳು ನಡೆಯುತ್ತಿದ್ದು, ಈವರೆಗೂ ಸರ್ಕಾರಗಳು ಆಶ್ವಾಸನೆಗೆ ಸೀಮಿತವಾಗಿವೆ. ಇದರಿಂದ ನಿವೃತ್ತಿ ಹೊಂದಿದ ಹಾಗೂ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರು ಬದುಕು ಕಟ್ಟಿಕೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದರು.
ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜುಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಹನುಮಂತಪ್ಪ, ಉಪಾಧ್ಯಕ್ಷ ಪ್ರಸಾದ್ ನಿಡಸಾಲೆ, ನಿಕಟಪೂರ್ವ ರಾಜ್ಯ ಸಂಚಾಲಕ ಜಾಲಮಂಗಳ ನಾಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ಜಿಲ್ಲಾಧ್ಯಕ್ಷ ಟಿ.ಪಿ.ನಂದೀಶ್‌ಕುಮಾರ್, ಕಾರ್ಯದರ್ಶಿ ಕೆ.ಆರ್. ಮಹದೇವ ಸ್ವಾಮಿ, ಮೈಸೂರು ಜಿಲ್ಲಾಧ್ಯಕ್ಷ ಡಾ.ಶರತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಆರ್.ಶಿವಕುಮಾರ್, ಖಜಾಂಚಿ ಬಿ.ಸಿದ್ದರಾಮು ಇತರರು ಇದ್ದರು.