

ಬೆಂಗಳೂರು: ನಗರದಲ್ಲಿರುವ ರಾಜ್ಯದ ಆಡಳಿತ ಕೇಂದ್ರ ವಿಧಾನಸೌಧ-ವಿಕಾಸಸೌಧ ಸೇರಿ ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಲು ಪಾಲಿಕೆ ನಿರ್ಧರಿಸಿದ್ದು, ರಸ್ತೆ ಬದಿ ಕಸ ಎಸೆಯುವವರ ವಿರುದ್ಧ ದಂಡ ವಸೂಲಿ ಮಾಡುವ ಕ್ರಮ ಕೈಗೊಳ್ಳಲಾಗುತ್ತಿದೆ.
ಪೂರ್ವ ವಲಯದ ರಾಮಸ್ವಾಮಿಪಾಳ್ಯ ವಾರ್ಡ್‌ನಲ್ಲಿ ಬುಧವಾರ ಪರಿಶೀಲನೆ ನಡೆಸಿದ ವಲಯ ಆಯುಕ್ತೆ ಸ್ನೇಹಲ್ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು.
ಇತ್ತೀಚಿಗೆ ರಸ್ತೆ ಬದಿ ಹಾಗೂ ಖಾಲಿ ಜಾಗಗಳಲ್ಲಿ ಹಲವು ಮಂದಿ ಕಸ ಎಸೆದು ಹೋಗುತ್ತಿದ್ದಾರೆ. ಇನ್ನೂ ಕೆಲವರು ರಾತ್ರಿ ವೇಳೆ ಮೂಟೆ ತುಂಬ ಕಸ ತುಂಬಿ ರಸ್ತೆಬದಿ ಬಿಟ್ಟು ಹೋಗುತ್ತಿದ್ದಾರೆ. ರಾಜಕಾಲುವೆ ಹಾದುಹೋಗಿರುವ ಕಡೆಗಳಲ್ಲೂ ಕಸ ಎಸೆಯುವ ಕೆಟ್ಟ ಚಾಳಿ ಮುಂದುವರಿದಿದೆ. ಜನಜಾಗೃತಿ ಹೊರತಾಗಿಯೂ ಎಲ್ಲೆಂದರಲ್ಲಿ ಕಸ ಹಾಕುತ್ತಿರುವ ಕಾರಣ ಅಂತಹವರಿಗೆ ದಂಡ ಬಿಧಿಸಿ ಬಿಸಿ ಮುಟ್ಟಿಸುವ ಕೆಲಸವನ್ನು ಅಧಿಕಾರಿಗಳು ಮಾಡಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.
ಮಸ್ಟರಿಂಗ್ ಪಾಯಿಂಟ್ ಶುಚಿಯಾಗಿರಲಿ:
ಚಿನ್ನಪ್ಪ ಗಾರ್ಡನ್ ಮುಖ್ಯರಸ್ತೆ ಬಳಿಯ ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಪರಿಶೀಲಿಸಿದ ವಲಯ ಆಯುಕ್ತರು, ಆಟೋ ಟಿಪ್ಪರ್ ಚಾಲಕರ ಹಾಜರಾತಿ ಹಾಗೂ ಸಮಯ ಪಾಲನೆ ಪರಿಶೀಲನೆ ನಡೆಸಿದರು. ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಮುಂಭಾಗದಲ್ಲಿ ತ್ಯಾಜ್ಯ, ಕಟ್ಟಡ ಭಗ್ನಾವಶೇಷ ರಾಶಿ ಕಂಡು ಅದನ್ನು ತೆರವುಗೊಳಿಸಿ ಮೆಟಲ್ ಶೀಟ್ ಅಳವಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇದೇ ವೇಳೆ ಚಿನ್ನಪ್ಪ ಗಾರ್ಡನ್‌ನ 4ನೇ ಮುಖ್ಯರಸ್ತೆಯಲ್ಲಿರುವ ಪೌರ ಕಾರ್ಮಿಕರ ಮಸ್ಟರಿಂಗ್ ಜಾಗಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರ ಹಾಜರಾತಿ ಹಾಗೂ ಸಮಯ ಪಾಲನೆಯನ್ನು ಪರಿಶೀಲಿಸಲಾಯಿತು. ಸ್ವಚ್ಛತಾ ಕಾರ್ಯ ವೇಳೆ ಕಡ್ಡಾಯವಾಗಿ ಸುರಕ್ಷತಾ ಕೈಗವಸು ಧರಿಸಲು ಹಾಗೂ ಸಮಯಕ್ಕೆ ಸರಿಯಾಗಿ ಮಸ್ಟರಿಂಗ್ ಜಾಗದಲ್ಲಿ ಹಾಜರಿರುವಂತೆ ವಲಯ ಆಯುಕ್ತರು ಪೌರಕಾರ್ಮಿಕರಿಗೆ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮದ ಎಜಿಎಂ ಅಭಿಲಾಷ್, ವಿಭಾಗೀಯ ಮಾರ್ಷಲ್ ಮೇಲ್ವಿಚಾರಕರು, ವಾರ್ಡ್ ಮಾರ್ಷಲ್, ಕಿರಿಯ ಆರೋಗ್ಯ ಪರಿವೀಕ್ಷಕರು ಹಾಜರಿದ್ದರು.
ನಿಯಮಿತವಾಗಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ:
ಎಂ.ಆರ್.ಎಸ್. ಪಾಳ್ಯದ ಮುಂಭಾಗದಲ್ಲಿರುವ ಅಯ್ಯಪ್ಪ ಶಾಲೆಯ ಬಳಿ ಮನೆ ಮನೆ ತ್ಯಾಜ್ಯ ಸಂಗ್ರಹಣೆಯ ಕಾರ್ಯ ನಿರ್ವಹಣೆ ಪರಿಶೀಲನೆ ನಡೆಸಲಾಯಿತು. ಪ್ರತಿ ಮನೆಯಿಂದ ನಿಯಮಿತವಾಗಿ ಸರಿಯಾದ ಸಮಯಕ್ಕೆ ತ್ಯಾಜ್ಯ ಸಂಗ್ರಹಿಸುವಂತೆ ಆಟೋ ಟಿಪ್ಪರ್ ಚಾಲಕರಿಗೆ ಸ್ನೇಹಲ್ ಸೂಚಿಸಿದರು.