ಗಣಿಗ ವಿರುದ್ಧ ಮಾನಹಾನಿ ಮೊಕದ್ದಮೆಯ ಎಚ್ಚರಿಕೆ

Joshi New
Published on

ಹುಬ್ಬಳ್ಳಿ : ರಾಜ್ಯ ಕಾಂಗ್ರೆಸ್ ಸರ್ಕಾರ ಉರುಳಿಸಲು ತಮಗೂ ಸೇರಿದಂತೆ ಬಿಜೆಪಿಯ ಪ್ರಮುಖ ಶಾಸಕರಿಗೆ ಕೋಟ್ಯಾಂತರ ರೂಪಾಯಿಯ ಆಮೀಷವೊಡ್ಡಿದ್ದಾಗಿ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ವಿರುದ್ಧ ಬಿಜೆಪಿ ಈಗಾಗಲೇ ದೂರು ದಾಖಲಿಸಿದೆ. ಆದರೂ, ಇದೇ ರೀತಿಯ ಅಪಪ್ರಚಾರ ಮುಂದುವರೆಸಿದರೆ ಗಣಿಗ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಜೋಶಿ, ಪೊಲೀಸರು ಶಾಸಕ ಗಣಿಗ ವಿರುದ್ಧ ಸರಿಯಾದ ರೀತಿಯ ತನಿಖೆ ಮಾಡಬೇಕು. ಹಿಟ್ ಆಂಡ್ ರನ್ ರೀತಿಯ ತನಿಖೆ ಆಗಬಾರದು ಎಂದು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.

ಮುಡಾ, ವಾಲ್ಮೀಕಿ ಹಗರಣಗಳನ್ನು ಮುಚ್ಚಿಹಾಕಲು ಹಾಗೂ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಬಾಲಿಶತನದ ಮನೋಭಾವ ಇರುವವರನ್ನು ಬಿಟ್ಟು ಕಾಂಗ್ರೆಸ್​ನವರು ಆರೋಪ ಮಾಡಿಸುತ್ತಿದ್ದಾರೆ. ಶಾಸಕ ರವಿಕುಮಾರ್ ಗಣಿಗ ಅವರನ್ನು ಕಾಂಗ್ರೆಸ್ ಬಲಿಪಶುವನ್ನಾಗಿ ಮಾಡುತ್ತಿದೆ ಎಂದು ದೂರಿದರು.

ರವಿಕುಮಾರ್ ಗಣಿಗ ಮೊದಲ ಬಾರಿ ಶಾಸಕರಿದ್ದಾರೆ. ಯಾರೋ ಹೇಳಿದ್ದಾರೆಂದು ಹೇಳಿಕೆ ಕೊಡಬೇಡಿ ಎಂದರು.

100 ಕೋಟಿ ಆಫರ್ ಮಾಡಿದ್ದಾಗಿ ಕಾಂಗ್ರೆಸ್ ಶಾಸಕ ಹೇಳಿದ್ದಾರೆ. ಆ ಹಣ ಎಲ್ಲಿದೆ ಎಂದು ಹೇಳಲಿ. ಒಬ್ಬಿಬ್ಬರು ಶಾಸಕರು ಹಣ ಪಡೆದರೆ ಏನೂ ಆಗುವುದಿಲ್ಲ. ಬಿಜೆಪಿ 66 ಶಾಸಕರ ಬಲ ಹೊಂದಿದೆ. ಅದರಲ್ಲಿ ಇಬ್ಬರು ಪಕ್ಷದ್ರೋಹ ಮಾಡಿದ್ದಾರೆ. ಇನ್ನೂ 64 ಶಾಸಕರು ಸರ್ಕಾರ ರಚನೆಗೆ ಬೇಕು. ಶಾಸಕರ ಆರೋಪದ ಲೆಕ್ಕಾಚಾರದಂತೆ ಅದಕ್ಕೆ ಅಂದಾಜು 6,600 ಕೋಟಿ ರೂ. ಬೇಕು. ಇಷ್ಟು ಹಣ ಎಲ್ಲಿಂದ ಬರುತ್ತದೆ ? ಬಾಲಿಶತನಕ್ಕೂ ಮಿತಿ ಬೇಕು ಎಂದು ವ್ಯಂಗ್ಯವಾಡಿದರು.

ಬಿಜೆಪಿಯ ಯಾವ ಮುಖಂಡರು ಹಣಕ್ಕಾಗಿ ಆಫರ್ ಮಾಡಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ ಸಚಿವ ಪ್ರಲ್ಹಾದ ಜೋಶಿ, ಕ್ಷುಲ್ಲಕ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಅಸಹಾಯಕ ಸ್ಥಿತಿಯಲ್ಲಿರುವುದರಿಂದ ಈ ರೀತಿಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದರು.

ಬಿಜೆಪಿಯಲ್ಲಿಯೂ ಈ ರೀತಿಯ ಬಾಲಿಶತನದ ಹೇಳಿ ನೀಡುವವರು ಇದ್ದಾರೆ. ಅವರಿಗೆ ಈಗಾಗಲೇ ಇಂತಹ ಹೇಳಿಕೆ ಕೊಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

ಈ ಸರ್ಕಾರ ತನ್ನ ಐದು ವರ್ಷದ ಅವಧಿ ಪೂರ್ಣಗೊಳಿಸಬೇಕು ಎಂಬುದು ಬಿಜೆಪಿಯ ಸ್ಪಷ್ಟ ನಿಲುವು. ಸರ್ಕಾರ ಬೀಳಿಸುವ ಕೆಲಸಕ್ಕೆ ಬಿಜೆಪಿಯವರು ಕೈ ಹಾಕುವುದಿಲ್ಲ. ಆದರೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಬಡಿದಾಡಿಕೊಳ್ಳುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಷಯ. ಅದರಲ್ಲಿ ಬಿಜೆಪಿ ಕೈ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಇಲ್ಲವೆಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಇದೇ ಉದ್ದೇಶದಿಂದ ಆ ಯೋಜನೆಗಳ ಫಲಾನುಭವಿಗಳನ್ನು ಕಡಿಮೆ ಮಾಡುವುದಾಗಿ ಸರ್ಕಾರ ಘೋಷಿಸಿದೆ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net