

ಮಡಿಕೇರಿ: ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಬಾಂಧವರ ಬೇಡಿಕೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದ ಪರಿಣಾಮ ಏ.೨೬ ರಂದು ನಡೆಯುವ ಲೋಕಸಭಾ ಚುನಾವಣೆಯ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದೇವೆ ಎಂದು ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಸೋಮಪ್ಪ ಎಚ್ಚರಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕ ಆದಿ ದ್ರಾವಿಡ ಜಾತಿ ಬಾಂಧವರಿಗೆ ೮ ವಿವಿಧ ರೀತಿಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಇದರಿಂದ ತೊಂದರೆ ಎದುರಾಗಿದೆ. ಆದ್ದರಿಂದ ಆದಿ ದ್ರಾವಿಡ ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣಪತ್ರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗುತ್ತಿದೆ. ಇದುವರೆಗೆ ಕ್ರಮ ಕೈಗೊಳ್ಳದ ಹಿನ್ನೆಲೆ ಕೊಡಗು ಜಿಲ್ಲೆಯಲ್ಲಿರುವ ಸುಮಾರು ೩೦ ಸಾವಿರ ತುಳು ಭಾಷಿಕ ಆದಿ ದ್ರಾವಿಡ ಪರಿಶಿಷ್ಟ ಜಾತಿ ಬಾಂಧವರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಿ.ಎಲ್.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಧು, ಕುಂಬೂರು ಹೋಬಳಿ ಅಧ್ಯಕ್ಷ ವೆಂಕಪ್ಪ ಉಪಸ್ಥಿತರಿದ್ದರು.