ತಿಂಗಳಾಂತ್ಯಕ್ಕೆ ಕನಿಷ್ಠ ಶೇ. 20ರಷ್ಟು ತೆರಿಗೆ ವಸೂಲಿಗೆ ತಾಕೀತು

24-hvr-06
Published on

ಹಾವೇರಿ: ಗ್ರಾಪಂ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನವನ್ನು ವಿಳಂಬವಾಗದಂತೆ ಸಕಾಲದಲ್ಲಿ ಆರಂಭಿಸಬೇಕು. ಕಾಲಕಾಲಕ್ಕೆ ತೆರಿಗೆ ವಸೂಲಿ ಮಾಡಬೇಕು. ಈ ತಿಂಗಳಾಂತ್ಯಕ್ಕೆ ಕನಿಷ್ಠ ಶೇ. 20ರಷ್ಟು ತೆರಿಗೆ ವಸೂಲಿ ಮಾಡಬೇಕು. ಇಲ್ಲವಾದರೆ ಪಿಡಿಒಗಳ ಮೇಲೆ ಶಿಸ್ತು ಕ್ರಮ ಜರುಗಿಸುವುದಾಗಿ ಜಿಪಂ ಸಿಇಒ ಮಹಮ್ಮದ್ ರೋಷನ್ ಎಚ್ಚರಿಸಿದರು.

ಜಿಪಂ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಪಿಡಿಒಗಳು ಹಾಗೂ ತಾಪಂ ಇಒಗಳು, ಸಹಾಯಕ ಕಾರ್ಯದರ್ಶಿಗಳ ಸಭೆ ನಡೆಸಿ, ಗ್ರಾಪಂಗಳಲ್ಲಿ ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ನಿಗದಿತ ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾಗಿ ಪ್ರಗತಿ ಕುಂಠಿತವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿ ಪ್ರಮಾಣ ಕಡಿಮೆಯಿದೆ. ದೂರ ಸಂಪರ್ಕ ಟವರ್, ಕೇಬಲ್ ಮತ್ತು ಕೇಬಲ್ ಡೆಕ್ಟ್ ಸಮೀಕ್ಷೆ, ಬಿಎಸ್​ಎನ್​ಎಲ್ ಮತ್ತು ಇತರ ದೂರ ಸಂಪರ್ಕ ಕಂಪನಿಗಳು ನೆಲದೊಳಗೆ ಒಎಫ್​ಸಿ ಕೇಬಲ್​ಗಳನ್ನು ಹಾಕಿದ್ದರೆ ಸಮೀಕ್ಷೆ ಕೈಗೊಂಡು ತೆರಿಗೆ ನಿಗದಿ ಮಾಡಬೇಕು. ಸಕಾಲ ಯೋಜನೆಯಡಿ ಸಾರ್ವಜನಿಕರಿಗೆ ನೀಡುವ ಸೇವೆಗಳನ್ನು ಕಾಲಮಿತಿಯೊಳಗೆ ಮಾಹಿತಿ ಒದಗಿಸಲು ಕ್ರಮಕೈಗೊಳ್ಳಬೇಕು. ಇ-ಸ್ವತ್ತು ನೀಡಿಕೆಯಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ನಿಗದಿತ ಸಮಯದೊಳಗೆ ಇ-ಸ್ವತ್ತು ಉತಾರಗಳ ಹಂಚಿಕೆ ಮಾಡಬೇಕು. ಐಪಿಜಿಆರ್​ಎಸ್, (ಇಂಟೀಗ್ರೇಟೆಡ್ ಪಬ್ಲಿಕ್ ಗ್ರೇವನ್ಸ್ ರಿರ್ಕಸ್ ಸಿಸ್ಟಂ) ಮುಖ್ಯಮಂತ್ರಿಗಳ ವೆಬ್​ಸೈಟ್​ನಲ್ಲಿ ಸಾರ್ವಜನಿಕ ದೂರುಗಳನ್ನು ತ್ವರಿತವಾಗಿ ಮತ್ತು ವಿಳಂಬಕ್ಕೆ ಆಸ್ಪದ ನೀಡದೇ ಕೂಡಲೆ ವಿಲೇವಾರಿಗೊಳಿಸಬೇಕು ಎಂದರು.
ಗ್ರಾಪಂ ಸದಸ್ಯರ ಗೌರವಧನವನ್ನು ಸಕಾಲದಲ್ಲಿ ಪಾವತಿಸಬೇಕು. ಪಂಚಾಯಿತಿಗಳ ಸಿಬ್ಬಂದಿ ವೇತನವನ್ನು ಇಎಫ್​ಎಂಎಸ್ ಮೂಲಕ(ಇಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್​ವೆುಂಟ್) ಸಕಾಲದಲ್ಲಿ ಪಾವತಿಸಲು ಸೂಚನೆ ನೀಡಿದರು.

ಪ್ರಶಂಸಾ ಪತ್ರ: ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಿಷನ್ ಅಮೃತ ಸರೋವರ ಯೋಜನೆಯಡಿ ಕಬ್ಬೂರು ಗ್ರಾಮದ ಕೆರೆಯನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ ಹಿನ್ನೆಲೆಯಲ್ಲಿ ಪಿಡಿಒ ಮೌಲಾಸಾಬ್ ಯಲವಗಿ, ತಾಂತ್ರಿಕ ಸಂಯೋಜಕ ಅಕ್ಷಯ ಮುಗಳಿ, ತಾಂತ್ರಿಕ ಸಹಾಯಕಿ ಪ್ರೀತಿ ಎ.ಬಿ., ಅವರನ್ನು ಅಭಿನಂದಿಸಿ ಪ್ರಶಂಸಾ ಪತ್ರ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net