ಟಿಬಿ ರೋಗದ ಬಗ್ಗೆ ಎಚ್ಚರಿಕೆ ಅಗತ್ಯ

ಆಲೂರು ಪಟ್ಟಣದಲ್ಲಿ ಆಯೋಜಿಸಿದ್ದ ಕ್ಷಯ ಮುಕ್ತ ಭಾರತದೆಡೆಗೆ 100 ದಿನಗಳ ಅಭಿಯಾನ ಜಾಥಾ ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಮಾತನಾಡಿದರು. ಡಾ.ಸುಧಾ, ಶಶಿಕಲಾ, ಪುಟ್ಟಸ್ವಾಮಿಗೌಡ, ಉಷಾ, ದಯಾನಂದ್, ದೇವರಾಜ್ ಇತರರಿದ್ದರು.
ಆಲೂರು ಪಟ್ಟಣದಲ್ಲಿ ಆಯೋಜಿಸಿದ್ದ ಕ್ಷಯ ಮುಕ್ತ ಭಾರತದೆಡೆಗೆ 100 ದಿನಗಳ ಅಭಿಯಾನ ಜಾಥಾ ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ ಮಾತನಾಡಿದರು. ಡಾ.ಸುಧಾ, ಶಶಿಕಲಾ, ಪುಟ್ಟಸ್ವಾಮಿಗೌಡ, ಉಷಾ, ದಯಾನಂದ್, ದೇವರಾಜ್ ಇತರರಿದ್ದರು.
Published on

ಬೇಲೂರು: ತಾಲೂಕು ಕಾನೂನು ಸೇವಾ ಸಮಿತಿ ಬೇಲೂರು ಹಾಗೂ ತಾಲೂಕು ಆರೋಗ್ಯಧಿಕಾರಿ ಕಚೇರಿ, ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ಕ್ಷಯ ಮುಕ್ತ ಭಾರತದೆಡೆಗೆ 100 ದಿನಗಳ ಅಭಿಯಾನ ಕುರಿತು ಶನಿವಾರ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.

ಕ್ಷಯ ಮುಕ್ತ ಭಾರತದೆಡೆಗೆ 100 ದಿನಗಳ ಅಭಿಯಾನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಎಸ್.ಶಶಿಕಲಾ, ಕ್ಷಯ ರೋಗವು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ. ಕ್ಷಯದ ಲಕ್ಷಣಗಳಾದ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಜ್ವರ, ಕಫ ಬರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗಳಿಗೆ ಭೇಟಿ ನೀಡಿ ಕಫ ಪರೀಕ್ಷೆ ಮತ್ತು ಎಕ್ಸೆರೇ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆದರೆ ಗುಣ ಪಡಿಸಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಕ್ಷಯ ಮುಕ್ತ ಭಾರತ ಮಾಡಲು ನೂರು ದಿನಗಳ ಅಭಿಯಾನ ಹಮ್ಮಿಕೊಂಡಿದ್ದು, ಪ್ರತಿ ಮನೆಯಲ್ಲೂ ಭೇಟಿ ನೀಡಿ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಿದ್ದರೆ ಅಂಥವರನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಅಲ್ಲದೆ ಅಪಾಯದಂಚಿನಲ್ಲಿರುವ ಮಧುಮೇಹಿಗಳು, ಧೂಮಪಾನಿಗಳು, ಮದ್ಯಪಾನಿಗಳು, ಅಪೌಷ್ಟಿಕತೆಯಿಂದ ಬಳಲುವವರು ಹಾಗೂ ವಲಸೆ ಬಂದಿರುವವರಿಗೆ ಗುರುತಿಸಿ ಸ್ಕೀನಿಂಗ್ ಮಾಡಲಾಗುವುದು. ಮೇಲ್ಕಂಡ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.

ಡಿ.7ರಿಂದ 24ರವರೆಗೆ 100 ದಿನಗಳ ಅಭಿಯಾನದಲ್ಲಿ ಸ್ಕ್ರೀನಿಂಗ್ ಮಾಡಿ ಕ್ಷಯ ರೋಗ ಪತ್ತೆಯಾದಲ್ಲಿ ಸೂಕ್ತ ಚಿಕಿತ್ಸೆಯನ್ನು ನೀಡಲಾಗುವುದು. 2025ಕ್ಕೆ ಕ್ಷಯ ಮುಕ್ತ ಕರ್ನಾಟಕ 2030ಕ್ಕೆ ಕ್ಷಯ ಮುಕ್ತ ಭಾರತ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಪಟ್ಟಣದ ಮುಖ್ಯರಸ್ತೆಯಲ್ಲಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಿಗೆ ಕ್ಷಯ ರೋಗದ ಕುರಿತು ಜಾಗೃತಿ ಮೂಡಿಸಿದರು.

ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಸುಧಾ, ನ್ಯಾಯಾಲಯದ ಸರ್ಕಾರಿ ಸಹಾಯಕ ಅಭಿಯೋಜಕಿ ಶಶಿಕಲಾ, ವಕೀಲರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿಗೌಡ, ಆರೋಗ್ಯ ಶಿಕ್ಷಣಾಧಿಕಾರಿ ಉಷಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಯಾನಂದ್, ಕ್ಷಯ ರೋಗದ ಮೇಲ್ವಿಚಾರಕ ದೇವರಾಜ್, ಆರ್‌ಬಿಎಸ್‌ಕೆ ವೈದ್ಯಾಧಿಕಾರಿ ಮತ್ತು ತಂಡ, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net