ಮಾಲ್ ಮಾಲೀಕರ ಬಂಧಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ

Published on

ತಿ.ನರಸೀಪುರ: ಪಂಚೆ ಧರಿಸಿದ್ದಕ್ಕೆ ಹಾವೇರಿ ಮೂಲದ ರೈತ ಕುಟುಂಬ ಜಿ.ಟಿ.ಮಾಲ್ ಪ್ರವೇಶಿಸದಂತೆ ತಡೆದು ಅಮಾನೀಯವಾಗಿ ನಡೆದುಕೊಂಡಿರುವುದು ನಾಡಿಗೆ ಮಾಡಿದ ಅಪಮಾನ. ದೇಶದ ರೈತರಿಗೆ ಮಾಡಿದ ಅವಮಾನ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಬನ್ನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನ್ನದಾತ ರೈತ ಪಂಚೆ ಧರಿಸುವುದು ನಮ್ಮ ಸಂಸ್ಕೃತಿ. ಪ್ರತಿಯೊಂದು ಶುಭ ಕಾರ್ಯಕ್ರಮದಲ್ಲಿಯೂ ಪಂಚೆಯನ್ನು ಧರಿಸಿಯೇ ಪೂಜೆ ಸಲ್ಲಿಸುತ್ತೇವೆ. ರೈತರು ಬೆಳೆದ ತರಕಾರಿಗಳನ್ನೇ ಮಾಲ್‌ಗಳಲ್ಲಿ ಮಾರಾಟ ಮಾಡಿ, ಲಾಭ ಗಳಿಸುತ್ತಾರೆ. ರೈತರು ಕಷ್ಟ ಪಟ್ಟು ಜಮೀನಿನಲ್ಲಿ ದುಡಿದರೆ ಮಾತ್ರ ಮಾಲ್‌ನಲ್ಲಿ ತರಕಾರಿ, ದಿನಸಿ ಮಾರಲು ಸಾಧ್ಯ. ಈ ಹಿಂದೆಯೂ ಮೆಟ್ರೋದಲ್ಲಿ ರೈತನಿಗೆ ಅಪಮಾನ ಮಾಡಲಾಗಿತ್ತು. ಈಗ ಮಾಲ್‌ನಲ್ಲಿ ಅಪಮಾನ ಮಾಡಲಾಗಿದೆ. ಇಂತಹ ಕೃತ್ಯಗಳು ಮರುಕಳಿಸಬಾರದು. ಕೂಡಲೇ ರಾಜ್ಯ ಸರ್ಕಾರ ಮಾಲ್ ಮಾಲೀಕರ ವಿರುದ್ಧ ಕ್ರಮ ಜರುಗಿಸಬೇಕು. ಅಲ್ಲದೆ ಅವರನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಬನ್ನೂರು ನಾರಾಯಣ್ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net