

ಚಿತ್ರದುರ್ಗ: ಯಾವುದೇ ದೂರುಗಳು ಬಾರದಂತೆ, ಪಾರದರ್ಶಕ, ನಿಷ್ಪಕ್ಷಪಾತವಾಗಿ ಹಾಗೂ ಜವಾಬ್ದಾರಿಯಿಂದ ವಿಧಾನಸಭಾ ಚುನಾವಣೆ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ವಿಧಾನಸಭೆ ಚುನಾವಣೆ ಕರ್ತವ್ಯ, ಜವಾಬ್ದಾರಿ ಹಾಗೂ ನೀತಿ ಸಂಹಿತೆ ಕುರಿತಂತೆ ಚುನಾವಣೆ ಹಾಗೂ ಇತರೆ ಅಧಿಕಾರಿಗಳಿಗೆ ಏರ್ಪಡಿಸಿದ್ದ 2 ದಿನಗಳ ತರಬೇತಿ ಕಾರ‌್ಯಾಗಾರದಲ್ಲಿ ಮಾತನಾಡಿದರು.
ಮುಕ್ತ, ನ್ಯಾಯಸಮ್ಮತ ಮತ್ತು ನಿರ್ಭೀತಿಯಿಂದ ಚುನಾವಣೆ ನಡೆಸಲು ಎಲ್ಲರ ಸಹಕಾರ ಅಗತ್ಯವಿದೆ. ತಮಗೆ ವಹಿಸಿದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಜಿಲ್ಲೆಯಲ್ಲಿ ಚುನಾವಣೆ ಕಾರ‌್ಯವನ್ನು ಯಶಸ್ವಿಗೊಳಿಸೋಣ ಎಂದರು.
ನಿಷ್ಪಕ್ಷಪಾತ ಚುನಾವಣೆಗೆ ಮಾದರಿ ನೀತಿ ಸಂಹಿತೆ ಅನುಷ್ಠಾನ ತಂಡಗಳ ಪಾತ್ರ ಹಿರಿದಾಗಿದೆ. ಇದರಡಿ ಸಂಚಾರಿ ಹಾಗೂ ಸ್ಥಿರ ಕಣ್ಗಾವ ಲು ತಂಡಗಳು ಕಾರ್ಯನಿರ್ವಹಿಸುತ್ತವೆ. ಸಂಚಾರಿ, ಸ್ಥಿರ ಕಣ್ಗಾವಲು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಸಿಆರ್‌ಪಿಸಿ 103 ಅಡಿ ಕಾರ‌್ಯನಿರ್ವಾಹಕ ದಂಡಾಧಿಕಾರಿ ಅಧಿಕಾರ ನೀಡಲಾಗಿದೆ. ಮತದಾರರನ್ನು ಓಲೈಸಲು ಕಾನೂನು ಬಾಹಿರವಾಗಿ ಹಣ, ವಸ್ತುಗಳ ಹಂಚಿಕೆ ನಿಯಂತ್ರಣ ಸವಾಲಿನ ಕೆಲಸವಾಗಿದೆ ಎಂದರು.
ಎಂಟು ಅಂತಾರಾಜ್ಯ ಚೆಕ್‌ಪೋಸ್ಟ್ ಸೇರಿ ಜಿಲ್ಲೆಯಲ್ಲಿ 35 ಚೆಕ್‌ಪೋಸ್ಟ್ ಸ್ಥಾಪಿಸಲಾಗಿದ್ದು ಹಣ, ಮದ್ಯ ಹಾಗೂ ಜನರಿಗೆ ಹಂಚಲು ತಂದ ವಸ್ತುಗಳನ್ನು ಜಪ್ತಿ ಮಾಡಲಾಗುತ್ತಿದೆ. ನೆರೆ ರಾಜ್ಯದಿಂದ ಅಕ್ರಮವಾಗಿ ಹಣ, ಮದ್ಯ ಹಾಗೂ ವಸ್ತುಗಳು ಜಿಲ್ಲೆಯೊಳಗೆ ಬಂದರೆ ಸಂಬಂಧಿಸಿದ ಚೆಕ್‌ಪೋಸ್ಟ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಚುನಾವಣಾ ಕರ್ತವ್ಯಕ್ಕೆ ಯಾವುದೇ ಕಾರಣಕ್ಕೂ ಗೈರು ಹಾಜರಾಗಬಾರದು. ಈ ಕರ್ತವ್ಯದಲ್ಲಿ ಅಶಿಸ್ತು ಕಂಡುಬಂದರೆ ಕಟ್ಟುನಿಟ್ಟಿನ ಕ್ರ ಮ ಜರುಗಿಸಲಾಗುವುದು. ವಿಡಿಯೋ ಮತ್ತು ಸಾಕ್ಷ್ಯ ಸಂಗ್ರಹಣೆಯೊಂದಿಗೆ ತಂಡಗಳು ಕಾರ್ಯ ನಿರ್ವಹಿಸಬೇಕೆಂದರು.
ಚುನಾವಣಾ ತರಬೇತಿ ನಿರ್ವಹಣಾ ಕೋಶದ ನೋಡಲ್‌ಅಧಿಕಾರಿ ಎನ್. ರಾಜು ಮಾತನಾಡಿ, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ಈ ಕಾರ‌್ಯಾಗಾರ ಆಯೋಜಿಸಲಾಗಿದೆ ಎಂದರು.
ಜಿಪಂ ಸಿಇಒ ಎಂ.ಎಸ್. ದಿವಾಕರ್, ಎಸ್‌ಪಿ ಕೆ. ಪರಶುರಾಮ್, ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಎನ್.ವಿ. ಶಿರಗಾಂವಕರ್, ಎಡಿಸಿ ಟಿ. ಜವರೇಗೌಡ, ಎಸಿ ಆರ್. ಚಂದ್ರಯ್ಯ, ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳಾದ ರಮೇಶ್‌ಕುಮಾರ್, ಆನಂದ್, ತಿಮ್ಮಪ್ಪ, ಮಹೇಂದ್ರಕುಮಾರ್, ವಿವೇಕಾನಂದ, ಚುನಾವಣಾ ವೆಚ್ಚದ ನೋಡಲ್ ಅಧಿಕಾರಿ ಮಧುಸೂದನ್, ಎಎಸ್‌ಪಿ ಕುಮಾರಸ್ವಾಮಿ ಇದ್ದರು.
ಆದ್ಯತೆ ಮೇಲೆ ಅನುಮತಿ
ಏಕಗವಾಕ್ಷಿಯಡಿ ರಾಜಕೀಯ ಪಕ್ಷಗಳು ಸಭೆ, ಸಮಾರಂಭ, ರ‌್ಯಾಲಿ, ಮೆರವಣಿಗೆ ನಡೆಸಲು ಅನುಮತಿಗಾಗಿ ಸಲ್ಲಿಸುವ ಅರ್ಜಿಗಳನ್ನು ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಅನುಮತಿ ಕೊಡಬೇಕು. ಬೇರೆ ಬೇರೆ ರಾಜಕೀಯ ಪಕ್ಷಗಳು ಸಮಾವೇಶಗಳಿಗೆ ಸ್ಥಳ ನಿಗದಿಯಲ್ಲಿ ಗೊಂದಲಕ್ಕೆ ಅವಕಾಶ ನೀಡಬಾರದು.
ಕೆ. ಪರಶುರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
...
ಸಂದೇಹ ಬಗೆಹರಿಸಿಕೊಳ್ಳಿ
ಈ ಕಾರ‌್ಯಾಗಾರದಲ್ಲಿ ವಿವಿಧ ತಂಡಗಳಿಗೆ ತರಬೇತಿ ನೀಡಲಾಗುತ್ತಿದ್ದು, ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯದ ಕುರಿತಂತೆ ಅಧಿಕಾರಿಗಳು ಸಂದೇಹಗಳನ್ನು ಬಗೆಹರಿಸಿಕೊಳ್ಳಬೇಕು.
ಎಂ.ಎಸ್. ದಿವಾಕರ್, ಜಿಪಂ ಸಿಇಒ ಹಾಗೂ ಎಂಸಿಸಿ ತಂಡದ ನೋಡಲ್ ಅಧಿಕಾರಿ