

ಬೆಂಗಳೂರು: ದೇಶದಲ್ಲಿ 2024ರ ಅಕ್ಟೋಬರ್ನಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್ಗಢದಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ವರದಿಯಾಗಿದೆ.ಈ ಮೂಲಕ 1951ರ ಅಕ್ಟೋಬರ್ನಲ್ಲಿ ವರದಿಯಾಗಿದ್ದ ತಾಪಮಾನ ದಾಖಲೆಯನ್ನು ಮುರಿದಿದೆ.
1901ರ ಅಕ್ಟೋಬರ್ನಲ್ಲಿ ದೇಶದಲ್ಲಿ ಅತಿ ಹೆಚ್ಚು ತಾಪಮಾನ ವರದಿಯಾಗಿತ್ತು.123 ವರ್ಷ ಬಳಿಕ ದೇಶದಲ್ಲಿ ಅಕ್ಟೋಬರ್ನಲ್ಲಿ ಅತಿ ಉಷ್ಣಾಂಶ ಕಂಡುಬಂದಿದೆ. ಇದಕ್ಕೆ ಹವಾಮಾನ ವೈಪರೀತ್ಯವೇ ಕಾರಣ ಎನ್ನುತ್ತಾರೆ ಹವಾಮಾನ ತಜ್ಞರು. ಪ್ರಸಕ್ತ ತಿಂಗಳ ಎರಡು ವಾರವರೆಗೆ ದೇಶದ ಕೆಲ ರಾಜ್ಯಗಳಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಈ ಬಾರಿ ನೈಋತ್ಯ ಮಾನ್ಸೂನ್( ಮುಂಗಾರು) ತಡವಾಗಿ ವಾಪಸ್ ಪಡೆದಿರುವುದು ಸೇರಿ ಇತರೆ ಕಾರಣಗಳಿಂದ ಕೆಲ ರಾಜ್ಯಗಳಲ್ಲಿ ಅಕ್ಟೋಬರ್ನಲ್ಲಿ ತಾಪಮಾನ ಜಾಸ್ತಿಯಾಗಿದೆ.ಅಲ್ಲದೆ, ದೇಶದ ಈಶಾನ್ಯ, ಮಧ್ಯ ರಾಜ್ಯಗಳಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ ಉಂಟಾಗುವ ಸಾಧ್ಯತೆ ಇರುವುದರಿಂದ ಬೆಚ್ಚಗಿನ ವಾತಾವರಣ ಇರಲಿದೆ. ಬಳಿಕ ಕ್ರಮೇಣವಾಗಿ ಉಷ್ಣಾಂಶ ಇಳಿಕೆಯಾಗಲಿದೆ. ಪ್ರಸಕ್ತ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್ನಲ್ಲಿ "ಲಾ-ನಿನಾ' ಆರಂಭವಾದರೆ ಈ ಬಾರಿ ತೀವ್ರ ಚಳಿ ಕಾಣಿಸಿಕೊಳ್ಳಲಿದೆ. ಆದರೆ, ಲಾ&ನಿನಾ ಈವರೆಗೆ ಆರಂಭವಾಗಿಲ್ಲ.
ಇತ್ತೀಚಿನ ಜಾಗತಿಕ ತಾಪಮಾನ ಮೂನ್ಸೂಚನೆ ಮೇರೆಗೆ ಡಿಸೆಂಬರ್ನಲ್ಲಿ "ಲಾ ನಿನಾ' ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬಾರಿ ಚಳಿಗಾಲದ ಸ್ವರೂಪ ಯಾವ ರೀತಿಯಲ್ಲಿ ಇರಲಿದೆ ಎಂಬುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಸಂಶೋಧನೆಯಲ್ಲಿ ತೊಡಗಿದೆ ಎನ್ನುತ್ತಾರೆ ಹವಾಮಾನ ತಜ್ಞರು.