

ಹುಬ್ಬಳ್ಳಿ : ಬಿಜೆಪಿ ಸಂಘಟನಾತ್ಮಕ ಹಾಗೂ ಅಭಿವೃದ್ಧಿ ಕುರಿತಂತೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಎಲ್ಲ ವಾರ್ಡ್ಗಳಲ್ಲಿ ಸಭೆಗಳನ್ನು ನಡೆಸಲು ತೀರ್ವನಿಸಲಾಗಿದ್ದು, ಈಗಾಗಲೇ 19 ವಾರ್ಡ್ಗಳಲ್ಲಿ ಸಭೆಗಳನ್ನು ನಡೆಸಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ವಿಶ್ವೇಶ್ವರನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೆ ತರಲಾಗಿದೆ. ಆ ಮೂಲಕ ಕೇಂದ್ರ ಸರ್ಕಾರದಿಂದ ಇನ್ನಷ್ಟು ಹೆಚ್ಚಿನ ಅನುದಾನ ತರಲು ಪ್ರಯತ್ನಿಸಿ, ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ಎಲ್ಲ ವಾರ್ಡ್ಗಳಲ್ಲಿ ಅಭಿವೃದ್ಧಿ ಕುರಿತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ರಾಜ್ಯ ಸರ್ಕಾರದಿಂದ ನನ್ನ ಕ್ಷೇತ್ರಕ್ಕೆ ಬರುವ ಅನುದಾನ ನೋಡಿಕೊಂಡು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುವುದು. ಸೋಮವಾರದಂದು ಹುಬ್ಬಳ್ಳಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದ್ದೇನೆ. 200 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾಗಿ ಇದೇ ಸಂದರ್ಭದಲ್ಲಿ ಹೇಳಿದರು.
ಅ. 5 ರಂದು ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ನಡೆಯಲಿರುವ ಪಥಸಂಚಲನದಲ್ಲಿ ಸೆಂಟ್ರಲ್ ಕ್ಷೇತ್ರದ ಪ್ರತಿ ವಾರ್ಡ್ನಿಂದ ಕನಿಷ್ಠ ನೂರು ಜನ ಸ್ವಯಂ ಸೇವಕರು ಭಾಗವಹಿಸಬೇಕು ಎಂದು ಕರೆ ನೀಡಿದರು.
ಕ್ಷೇತ್ರದ ಬಿಜೆಪಿ ಅಧ್ಯಕ್ಷ ರಾಜು ಕಾಳೆ, ಪಾಲಿಕೆ ಸದಸ್ಯೆ ಸೀಮಾ ಮೊಗಲಿಶೆಟ್ಟರ, ಪ್ರವೀಣ ಪವಾರ, ರಾಮನಗೌಡ ಶೆಟ್ಟನಗೌಡರ, ಸಿದ್ದು ಮೊಗಲಿಶೆಟ್ಟರ, ರವಿ ನಾಯ್ಕ, ಅಶೋಕ ವಾಲ್ಮೀಕಿ ಹಾಗೂ ಇತರರು ಉಪಸ್ಥಿತರಿದ್ದರು.