ವಾರ್ಡುವಾರು ಅಭಿಯಾನ, ಭ್ರಷ್ಟತನಕ್ಕೆ ಅವಕಾಶವಿಲ್ಲ

999
Published on

ಚಿಕ್ಕಬಳ್ಳಾಪುರ: ಭ್ರಷ್ಟಾಚಾರ, ಜನಸಾಮಾನ್ಯರ ಕಚೇರಿ ಅಲೆದಾಟವನ್ನು ತಪ್ಪಿಸಲು ನಗರದಲ್ಲಿ ವಾರ್ಡುವಾರು ಅಭಿಯಾನವನ್ನು ಕೈಗೊಂಡು ಆಸ್ತಿ ಖಾತೆ ನೀಡಲಾಗುವುದು ಎಂದು ಶಾಸಕ ಪ್ರದಿಪ್ ಈಶ್ವರ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ನಗರದ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳನ್ನು ಹೊಂದಿರದ ೧೪ ಸಾವಿರ ಮನೆಗಳಿದ್ದು ಇವುಗಳಿಗೆ ಬಿ- ಖಾತೆ ಮಾಡಿಕೊಡುವ ನಿಟ್ಟಿನಲ್ಲಿ ಫೆ.೨೦, ೨೧, ೨೨ ರಂದು ನಗರದ ಪ್ರತಿ ವಾರ್ಡ್ಗಳಿಗೂ ನಗರಸಭೆ ಅಧಿಕಾರಿಗಳು ಬಂದು ದಾಖಲೆಗಳನ್ನು ಪಡೆಯಲಿದ್ದಾರೆ ಎಂದರು. ಇದೀಗ ನ್ಯಾಯಾಲಯದ ಆದೇಶದಂತೆ ೯೦ ದಿನಗಳ ಸಮಯಾವಕಾಶವನ್ನು ನೀಡಿದ್ದು ಖಾತೆ ಹೊಂದಿಲ್ಲದ ನಗರ ವಾಸಿಗಳು ತ್ವರಿತವಾಗಿ ಅರ್ಜಿ ಸಲ್ಲಿಸಬೇಕು ಎಂದರು.

ಅಭಿಯಾನದಿಂದ ದಲ್ಲಾಳಿಗಳಿಗೆ ಹಣ ನೀಡುವುದು ತಪ್ಪಲಿದ್ದು ಪಾರದರ್ಶಕತೆ ಕಾಪಾಡಲಾಗುವುದು. ಇದರ ಬಗ್ಗೆ ಪ್ರತಿ ಮನೆಗೂ ಕರಪತ್ರ ಮತ್ತು ಚೆಕ್ ಲಿಸ್ಟ್ ತಲುಪಿಸಲಾಗುವುದು. ಜನಸಾಮಾನ್ಯರು ಯಾರಿಗೂ ಹಣ ಕೊಡುವ ಅಗತ್ಯ ಇಲ್ಲ. ಒಂದು ವೇಳೆ ದಲ್ಲಾಳಿಗಳು ಪೀಡಿಸಿದರೆ, ಅವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

*ಅಭಿಯಾನ ಸದ್ವಿನಿಯೋಗ

ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ಖಾತೆಯನ್ನು ಒದಗಿಸುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಇದರ ಸೇವೆಯನ್ನು ಸದ್ವಿನಿಯೋಗಪಡಿಸಿಕೊಳ್ಳಲು ನಗರಸಭಾ ಅಧ್ಯಕ್ಷ ಎ.ಗಜೇಂದ್ರ ಸಲಹೆ ನೀಡಿದರು.

ಇಲ್ಲಿನ ನಗರಸಭೆ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಆಸ್ತಿ ಖಾತೆಯನ್ನು ಹೊಂದಿರದ ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಜೆ.ನಾಗರಾಜ್, ಪೌರಾಯುಕ್ತ ಮನ್ಸೂರ್ ಅಲಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net