ಮೂಲ ಸಮಸ್ಯೆಗಳಿಗೂ ಸಿಗದ ಪರಿಹಾರ, ಹುಬ್ಬಳ್ಳಿ ವಾರ್ಡ್ ಸದಸ್ಯರ ಆಕ್ರೋಶ

IMG_20240821_205849_893.jpg
Published on

ಹುಬ್ಬಳ್ಳಿ: ರಸ್ತೆ, ಒಳಚರಂಡಿ, ಗಟಾರು, ಕುಡಿಯುವ ನೀರು ಇವು ನಗರ ನಾಗರಿಕರ ಮೂಲಭೂತ ಅಗತ್ಯಗಳು. ಆದರೆ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಇವುಗಳನ್ನು ಪೂರೈಸುವುದಕ್ಕೆ ಆಗುತ್ತಿಲ್ಲ, ಮೂಲ ಸಮಸ್ಯೆಗಳೇ ಜನರನ್ನು ಹೈರಾಣಾಗಿಸುತ್ತಿವೆ. ಯಾವಾಗ ಇವುಗಳಿಗೆ ಶಾಶ್ವತ ಪರಿಹಾರ ಕೊಡುತ್ತೀರಿ?

ಇಲ್ಲಿಯ ಪಾಲಿಕೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಬುಧವಾರ ಮೇಯರ್ ರಾಮಪ್ಪ ಬಡಿಗೇರ ಅಧ್ಯಕ್ಷತೆಯಲ್ಲಿ ಹುಬ್ಬಳ್ಳಿ ವಿಭಾಗದ ವಾರ್ಡ್ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಹಾಗೂ ಸದಸ್ಯರ ಸಮಸ್ಯೆ ಆಲಿಕೆಗೆ ಆಯೋಜಿಸಿದ್ದ ಸಭೆಯಲ್ಲಿ ಕೇಳಿ ಬಂದ ಪ್ರಶ್ನೆಗಳಿವು.

ಇದೇ ಮೊದಲ ಬಾರಿ ಪ್ರತಿ ವಾರ್ಡ್ ನ ಸಮಸ್ಯೆ ಆಲಿಕೆಗೆ ಮೇಯರ್ ಅವರು ಸಭೆ ನಡೆಸುತ್ತಿರುವುದಕ್ಕೆ ಅನೇಕ ಸದಸ್ಯರು ಅಭಿನಂದನೆ ಸಲ್ಲಿಸಿದರು. ಪ್ರತಿಯೊಬ್ಬರು ತಮ್ಮ ವಾಡಿರ್ನಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು.

ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ಕೊಡಿಸುವ ಪ್ರಯತ್ನ ಮಾಡಿದರು. ಕೆಲವು ತೊಂದರೆಗಳಿಗೆ ಸ್ಥಳದಲ್ಲೇ ಪರಿಹಾರ ಸಿಕ್ಕರೆ ಇನ್ನೂ ಕೆಲವು ನಂತರದಲ್ಲಿ ಮಾಡಿಕೊಡುವ ಭರವಸೆಯನ್ನು ಅಧಿಕಾರಿಗಳು ನೀಡಿದರು. ಇದು ಕಾಟಾಚಾರದ ಸಭೆಯಾಗಬಾರದು. ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಸದಸ್ಯರು ಆಗ್ರಹಿಸಿದರು.

ಕಲುಷಿತ ನೀರು:
ಸಭೆಯಲ್ಲಿ ಅನೇಕ ಸದಸ್ಯರು ಕಲುಷಿತ ನೀರು ಪೂರೈಕೆಯಾಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ನೀರು ಸಂಸ್ಕರಣೆಗೆ ಬೇಕಾದ ರಾಸಾಯನಿಕಗಳು ಇವೆ. ಆದರೆ, ನೀರು ಸಂಸ್ಕರಿಸುವ ಬೆಡ್ ಹಾಳಾಗಿವೆ. ಹಾಗಾಗಿ ಸರಿಯಾಗಿ ಸಂಸ್ಕರಣೆಯಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಬೆಡ್ಗಳ ಪೂರೈಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೇಲಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ ಎಂಬ ಮಾಹಿತಿಯೂ ಸಭೆಯಲ್ಲಿ ಬಹಿರಂಗವಾಯಿತು. ಇಂಜಿನಿಯರ್ಗಳ ತಂಡವನ್ನು ಕಳುಹಿಸಿ ವಾಸ್ತವ ಸ್ಥಿತಿ ಮಾಹಿತಿ ಪಡೆಯುವುದಾಗಿ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಭರವಸೆ ನೀಡಿದರು.

ವಾರ್ಡ್ ಫಂಡ್ ಸರಿಯಾಗಿ ಹಂಚಿ:
ಅನೇಕ ಸದಸ್ಯರು ವಾರ್ಡ್ ಫಂಡ್ ತಮಗೆ ಒಂದು ಪೈಸೆಯೂ ಸಿಗುತ್ತಿಲ್ಲ. ನಾವು ಜನರಿಂದ ಆಯ್ಕೆಯಾಗಿಲ್ಲವೇ? ಎಂದು ಪ್ರಶ್ನಿಸಿದರು. ಹಲವು ಕಡತಗಳು ಆಯುಕ್ತರ ಬಳಿ ಹಾಗೇ ಕುಳಿತಿವೆ. ಬೇಗ ಅವುಗಳಿಗೆ ಮುಕ್ತಿ ಕಾಣಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.

ಪ್ರತಿಕ್ರಿಯಿಸಿದ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಎಲ್ಲ ಅನುದಾನಗಳನ್ನು ಪ್ರಸಕ್ತ ಆಥಿರ್ಕ ವರ್ಷದಲ್ಲೇ ಖರ್ಚು ಮಾಡಲಾಗುತ್ತದೆ. ಸದಸ್ಯರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಹೇಳಿದರು. ಸಿಬ್ಬಂದಿ ಕೊರತೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಲ್ಲಿಯವರೆಗೂ ಬೇರೆ ಹುದ್ದೆಗಳಲ್ಲಿರುವ ಸಿಬ್ಬಂದಿ ನಿಯೋಜನೆ ಮೇರೆಗೆ ಪಡೆದುಕೊಂಡು ಕೆಲಸ ಮಾಡಲಾಗುವುದು ಎಂದರು.

ವಲಯ ಕಚೇರಿಯಲ್ಲಿ ಸಭೆ:
ಹುಬ್ಬಳ್ಳಿ ಧಾರವಾಡದಲ್ಲಿ 12 ವಲಯ ಕಚೇರಿಗಳಿವೆ. ಹಾಗಾಗಿ ಪ್ರತಿಯೊಂದು ವಲಯದ ವ್ಯಾಪ್ತಿಯ ಸದಸ್ಯರ ಸಭೆಯನ್ನು ಆಯಾ ವಲಯದಲ್ಲಿ ಏರ್ಪಡಿಸುವುದರಿಂದ ಇನ್ನಷ್ಟು ನಿಖರವಾಗಿ ಸಮಸ್ಯೆಗಳನ್ನು ಪರಿಹರಿಸಿದಂತಾಗುತ್ತದೆ ಎಂದು ಸದಸ್ಯ ಸಂತೋಷ ಚವ್ಹಾಣ ಸಲಹೆ ನೀಡಿದರು. ಇದಕ್ಕೆ ಹಲವು ಸದಸ್ಯರು ಧ್ವನಿಗೂಡಿಸಿದರು. ಸದಸ್ಯರಾದ ಚಂದ್ರಶೇಖರ ಮನಗುಂಡಿ, ಸುನಿತಾ ಬುರಬುರೆ, ರಾಧಾಬಾಯಿ ಸಾರೆ, ನಿರಂಜನ ಹಿರೇಮಠ, ಆರಿಫ ಭದ್ರಾಪುರ, ಇಕ್ಬಾಲ್ ನವಲೂರ, ಇತರರು ಸಮಸ್ಯೆ ಹೇಳಿಕೊಂಡರು.

ಮೇಯರ್ ಸೂಚನೆ:
ಮೇಯರ್ ಅನುದಾನ, ವಾರ್ಡ ಅನುದಾನವನ್ನು ಆಯಾ ವರ್ಷದಲ್ಲಿಯೇ ಬಳಸಿಕೊಳ್ಳಬೇಕು, ಅಭಿವೃದ್ಧಿ ಕೆಲಸ ಮಾಡಬೇಕು. ವ್ಯರ್ಥವಾಗಲು ಬಿಡಬಾರದು ಎಂದು ಮೇಯರ್ ರಾಮಪ್ಪ ಬಡಿಗೇರ ಸೂಚಿಸಿದರು. ವಾರ್ಡವಾರು ಸಮಸ್ಯೆ ಆಲಿಸಲು ಪ್ರಗತಿ ಪರಿಶೀಲನಾ ಸಭೆ ನಡೆಸಲಾಗಿದೆ. ಸದಸ್ಯರ ಕುಂದುಕೊರತೆ ಆಲಿಸಿ ಸ್ಪಂದಿಸಲಾಗುವುದು. ಒಳಚರಂಡಿ ದುರಸ್ತಿ ಬಗ್ಗೆ ಹಲವು ಸದಸ್ಯರು ಗಮನಕ್ಕೆ ತಂದಿದ್ದಾರೆ. ಹೊಸ ಸಿಲ್ಟ್, ಜೆಟ್ ವಾಹನಗಳನ್ನು ಖರೀದಿ ಮಾಡಲಾಗುವುದು. ಹಾಳಾದ ವಾಹನಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net