ವಾರ್ಡ್ ವಿಭಜನೆ ಪ್ರಕ್ರಿಯೆ ಪೂರ್ಣ

Published on

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಪ್ರಕ್ರಿಯೆಯ ಪ್ರಥಮ ಹಂತ ಪೂರ್ತಿಗೊಂಡಿದ್ದು, ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ತಯಾರಿಸಿರುವ ಕರಡು ವರದಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಬೇಕಾಗಿದೆ. ಕರಡು ಪಟ್ಟಿಯಲ್ಲಿ ಲೋಪಗಳಿದ್ದಲ್ಲಿ, ಇದನ್ನು ಗುರುತಿಸಿ, ಜಿಲ್ಲಾಮಟ್ಟದ ವರದಿಯಲ್ಲಿ ಜಿಲ್ಲಾಧಿಕಾರಿಗಳು ಡಿಲಿಮಿಟೇಶನ್ ಆಯೋಗಕ್ಕೆ ನ.5ರೊಳಗೆ ಹಸ್ತಾಂತರಿಸಲಿದ್ದಾರೆ.

ಚುನಾವಣಾ ಆಯೋಗ ಈ ವರದಿಯನ್ನು ನ.16ರಂದು ಪ್ರಕಟಗೊಳಿಸಲಿದೆ. ರಾಜ್ಯದಲ್ಲಿನ 1200 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಒಟ್ಟು 21900 ವಾರ್ಡ್‌ಗಳನ್ನು ಗುರುತಿಸಲಾಗಿದೆ. 2011ರ ಜನಗಣತಿ ಪ್ರಕಾರ ವಾರ್ಡ್‌ಗಳ ಗಡಿ ನಿರ್ಣಯವನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದ್ದು, ಈ ಹಿಂದಿನ 21900 ವಾರ್ಡ್‌ಗಳಿಂದ 23612ಕ್ಕೆ ವಾರ್ಡ್‌ಗಳ ಸಂಖ್ಯೆ ಹೆಚ್ಚಳಗೊಳ್ಳಲಿದೆ. ರಾಜ್ಯದಲ್ಲಿ ಒಟ್ಟು 941 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 17337 ವಾರ್ಡ್‌ಗಳನ್ನು ಹೊಂದಿದೆ.

150 ಬ್ಲಾಕ್ ಪಂಚಾಯಿತಿಗಳಲ್ಲಿ 2267 ವಾರ್ಡ್‌ಗಳು, 14 ಜಿಲ್ಲಾ ಪಂಚಾಯಿತಿಗಳಲ್ಲಿ 346 ವಾರ್ಡ್‌ಗಳು, 87 ನಗರಸಭೆಗಳಲ್ಲಿ 3241 ವಾರ್ಡ್‌ಗಳು, ಆರು ಮಹಾನಗರಪಾಲಿಕೆಯಲ್ಲಿ 421 ವಾರ್ಡ್‌ಗಳಿವೆ.

ರಾಜ್ಯ ಸ್ಥಳೀಯಾಡಳಿತ ಸಂಸ್ಥೆಗಳಿಗೆ 2025ರಲ್ಲಿ ಚುನಾವಣೆ ನಡೆಯಲಿದೆ. ಬಹುತೇಕ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕನಿಷ್ಠ ಎರಡು ವಾರ್ಡ್‌ಗಳ ಹೆಚ್ಚಳವುಂಟಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net