

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಐದು ನಗರ ಪಾಲಿಕೆಗಳಲ್ಲಿ ಹೊಸದಾಗಿ ವಾರ್ಡ್ ರಚಿಸುವ ಸಂಬಂಧ ‘ವಾರ್ಡ್‌ಗಳ ಪುನರ್ ವಿಂಗಡಣಾ ಆಯೋಗ’ದ ಮೊದಲ ಸಭೆ ಗುರುವಾರ (ಸೆ.4) ನಿಗದಿಯಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರೇ ಆಯೋಗದ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಸದಸ್ಯರಾಗಿ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಐದೂ ಪಾಲಿಕೆಗಳಲ್ಲಿ ಅತಿ ಹಿರಿಯ ಆಯುಕ್ತರು ಹಾಗೂ ಜಿಬಿಎ ವಿಶೇಷ ಆಯುಕ್ತ (ಆಡಳಿತ, ಕಂದಾಯ ವಿಭಾಗ) ಸದಸ್ಯ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡವು ಸಭೆ ನಡೆಸಿ ಪೂರ್ವಭಾವಿ ಸಿದ್ಧತೆಗಳನ್ನು ಚರ್ಚಿಸಿ ವಾರ್ಡ್‌ಗಳ ವಿಂಗಡಣೆಗೆ ಚಾಲನೆ ನೀಡಲಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಈಗಷ್ಟೇ ಹೊಸ ಪಾಲಿಕೆಗಳು ಅಸ್ತಿತ್ವಕ್ಕೆ ಬಂದಿರುವುದರಿಂದ ಅವುಗಳ ಆಡಳಿತ ಸುಗಮವಾಗಿ ನಡೆಸಲು ಜಿಬಿಎ ಅಗತ್ಯ ಸಹಕಾರ ನೀಡಲಿದೆ. ಪುನರ್ ವಿಂಗಡಣೆ 3 ತಿಂಗಳೊಳಗೆ ಪೂರ್ಣಗೊಂಡು ಚುನಾವಣೆಗೆ ಬೇಕಾದ ಪೂರಕ ವಾತಾವರಣ ಸೃಷ್ಟಿಸಲಾಗುವುದು. ಆ ಬಳಿಕ ಸರ್ಕಾರ ಪಾಲಿಕೆಗಳಿಗೆ ಎಲೆಕ್ಷನ್ ನಡೆಸುವ ತೀರ್ಮಾನ ಕೈಗೊಳ್ಳಲಿದೆ ಎಂದರು.
ನಾಮಫಲಕಗಳಿಗೆ ಕ್ಯೂಆರ್ ಕೋಡ್:
ಎಲ್ಲ ಪಾಲಿಕೆಗಳ ಕಚೇರಿ, ಕಟ್ಟಡ, ರಸ್ತೆ ನಾಮಲಕಗಳಲ್ಲಿ ಆಯಾ ಪಾಲಿಕೆಗಳ ಹೆಸರು ಉಲ್ಲೇಖಿಸಲು ಕ್ರಮ ಕೈಗೊಳ್ಳಲಾಗಿದೆ. ಒಮ್ಮೆಲೇ ಎಲ್ಲ ಕಡೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆರಂಭದಲ್ಲಿ ಪ್ರಮುಖ ಪ್ರದೇಶಗಳ ರಸ್ತೆಗಳಲ್ಲಿನ ಲಕಗಳಲ್ಲಿ ಕ್ಯೂಆರ್ ಕೋಡ್ ಹಾಕುವುದರಿಂದ ನಾಗರಿಕರಿಗೆ ತಾವು ಯಾವ ಕಾರ್ಪೊರೇಷನ್‌ಗೆ ಸೇರುತ್ತೇವೆ ಎಂಬ ಮಾಹಿತಿ ಸಿಗುತ್ತದೆ. ನಂತರ ಇನ್ನಿತರ ಉಪಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಪಾಲಿಕೆಗಳಿಂದ ಹಣ ವರ್ಗಾವಣೆ ಇರದು:
ಬಿಬಿಎಂಪಿ ಇದ್ದಾಗ ಚಾಲ್ತಿಯಲ್ಲಿದ್ದ ಎಲ್ಲ ಬ್ಯಾಂಕ್ ಖಾತೆಗಳನ್ನು ಜಿಬಿಎಗೆ ಬದಲಾಯಿಸಲಾಗುತ್ತಿದೆ. ಇವುಗಳಲ್ಲಿ ಆಯಾ ಪಾಲಿಕೆಗಳಿಗೆ ಬೇಕಾದ ಖಾತೆಗಳನ್ನು ಬಳಸಿಕೊಳ್ಳಲು ಸೂಚಿಸಲಾಗಿದೆ. ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನವನ್ನು ಆಯಾ ಪ್ರದೇಶಗಳು ಬರುವ ಪಾಲಿಕೆಗೆ ವಿಂಗಡಿಸಲಾಗುವುದು. ಆದರೆ, ಒಂದು ಪಾಲಿಕೆಯ ಆದಾಯವನ್ನು ಬೇರೆ ಕಾರ್ಪೊರೇಷನ್‌ಗೆ ವರ್ಗಾಯಿಸಲು ಅವಕಾಶ ಇಲ್ಲ. ಕೊರತೆ ಉಂಟಾದಲ್ಲಿ ಸರ್ಕಾರ ನೆರವು ನೀಡಲಿದೆ. ಹೆಚ್ಚುವರಿ ಬಜೆಟ್ ಮೂಲಕವೂ ಹಣ ಬಿಡುಗಡೆಗೂ ಅವಕಾಶ ಇದೆ ಎಂದು ವಿವರಿಸಿದರು.
ವಾರ್ಡ್ ವಿಂಗಡಣೆಗೆ ಗಡುವು ವಿವರ:
ಆಯೋಗ ರಚಿಸಿ ಅಧಿಸೂಚನೆ - ಸೆ.2
ಆಯೋಗದಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ - ಸೆ.23
ಕರಡು ಅಧಿಸೂಚನೆ ಪ್ರಕಟ - ಸೆ.26
ಕರಡಿಗೆ ಸಲಹೆ/ಆಕ್ಷೇಪಣೆ - ಅ.10
ಆಕ್ಷೇಪಣೆ ಪರಿಷ್ಕರಿಸಿ ಶಿಾರಸು - ಅ.17
ಸರ್ಕಾರದಿಂದ ಅಂತಿಮ ಅಧಿಸೂಚನೆ - ನ.1
ರಸ್ತೆ ದುರಸ್ತಿಗೆ ಆದ್ಯತೆ:
ನಗರದಲ್ಲಿ ಹಲವು ರಸ್ತೆಗಳು ಹಾಳಾಗಿದ್ದು, ಇನ್ನೂ ಕೆಲವೆಡೆ ರಸ್ತೆ ಗುಂಡಿ ಉಂಟಾಗಿವೆ. ಇವುಗಳನ್ನು ನಿರಂತರವಾಗಿ ಮುಚ್ಚಲಾಗುತ್ತಿದೆ. ಪ್ರಮುಖ ರಸ್ತೆಗಳ ದುರಸ್ತಿ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಿದ್ದು, ಈಗ ಆಯಾ ಪಾಲಿಕೆಗಳಲ್ಲೇ ಕೆಲಸಗಳು ಮುಂದುವರಿಯಲಿವೆ. ರಸ್ತೆಗುಂಡಿಗಳನ್ನು ಕೂಡ ಆಯಾ ಕಾರ್ಪೊರೇಷನ್‌ಗಳೇ ನಿರ್ವಹಿಸಲಿದೆ. ಮಳೆಯಿಂದಾಗಿ ಗುಂಡಿ ಮುಚ್ಚುವ ಕೆಲಸ ನಿಧಾನವಾಗಿದ್ದು, ಮಳೆ ಬಿಡುವು ಕೊಟ್ಟಲ್ಲಿ ತ್ವರಿತವಾಗಿ ಕೆಲಸ ಕೈಗೊಳ್ಳಲಾಗುವುದು. ಶಾಶ್ವತ ಪರಿಹಾರಕ್ಕಾಗಿ ರಸ್ತೆ ಮೇಲ್ದರ್ಜೆ, ವೈಟ್ ಟಾಪಿಂಗ್ ಯೋಜನೆ (1,000 ಕಿ.ಮೀ.) ಜಾರಿ ಮಾಡಲಾಗುತ್ತಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.