ಯುಜಿಡಿ ಕಾಮಗಾರಿಗೆ ಭೂಮಿಪೂಜೆ

IMG_20251012_204638_578.jpg
Published on

ಹುಬ್ಬಳ್ಳಿ: ಮಹಾನಗರದ ವಾರ್ಡ್ ನಂಬರ್ 49ರ ಶೆಟ್ಟರ್ ಲೇಔಟ್ ಹನುಮಂತನಗರ ರಾಣಿ ಚೆನ್ನಮ್ಮ ನಗರ ಹಾಗೂ ಪಟೇಲ ಲಕ್ಷ್ಮೀ ನಗರಗಳ ಯುಜಿಡಿ ಕಾಮಗಾರಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಾಮಾನ್ಯವಾಗಿ ರಾಜ್ಯದ ಶಾಸಕರು ಅರ್ಧ ಸಮಯವನ್ನು ಬೆಂಗಳೂರಿನಲ್ಲೇ ಕಳೆಯುತ್ತಾರೆ. ಆದರೆ, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಉತ್ಸಾಹಿ ಶಾಸಕ ಮಹೇಶ ಟೆಂಗಿನಕಾಯಿ ಬೆಂಗಳೂರಿನಲ್ಲಿ ಸಭೆಗೆ ಹೋಗಿ ಮತ್ತೆ ಮರುದಿನ ತಮ್ಮ ಕ್ಷೇತ್ರಕ್ಕೆ ಬಂದು ಜನರೊಂದಿಗೆ ಬೆರೆಯುತ್ತಾರೆ. ಇತರರಿಗೆ ಮಾದರಿಯಾಗಿ ಕೆಲಸ ಮಾಡುತ್ತಿರುವ ಶಾಸಕರು ಪಕ್ಷ ಸಂಘಟನೆಯಲ್ಲಿಯೂ ತೊಡಗಿಸಿಕೊಳ್ಳುತ್ತಾರೆ ಎಂದರು.

ತಮ್ಮ ಶಕ್ತಿಮೀರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆ ನಡುವೆಯೂ ಮಹೇಶ ಅವರು ಹಲವು ಬಾರಿ ಕೇಂದ್ರ ಸರ್ಕಾರದ ಅನುದಾನ, ಸಿ ಆರ್ ಎಫ್ ಅನುದಾನವನ್ನು ತರಲು ಪ್ರಯತ್ನ ಮಾಡುತ್ತಿದ್ದಾರೆ. ನಿಜಕ್ಕೂ ಅವರ ಜನಪರ ಕಾರ್ಯ ಮೆಚ್ಚುವಂಥದ್ದು ಎಂದು ಜೋಶಿ ಹೇಳಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಕ್ಷೇತ್ರದಲ್ಲಿ ಮಾಡುವ ಅಭಿವೃದ್ಧಿಪರ ಕೆಲಸಗಳಿಗೆ ಕೇಂದ್ರ ಸಚಿವ ಜೋಶಿ ಅವರ ಸಹಕಾರ ಬಹಳಷ್ಟಿದೆ. ಅನುದಾನ ಕೊರತೆ ಬಂದಾಗೆಲ್ಲ ಕೇಂದ್ರ ಸಚಿವರು ಸಹಕಾರ ನೀಡಿದ್ದಾರೆ. ಸಿಆರ್ ಎಫ್ ಅನುದಾನ ತರಲು ಅವರ ಮೂಲಕ ಪ್ರಯತ್ನ ನಡೆಸುತ್ತಿದ್ದೇನೆ ಎಂದು ಹೇಳಿದರು.

ವಾರ್ಡ್ ಸದಸ್ಯೆ ವೀಣಾ ಚೇತನ್ ಬರದ್ವಾಡ ಮಾತನಾಡಿ, ಹನುಮಂತನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ರಸ್ತೆ ಡಾಂಬರೀಕರಣ ಆಗಿರಲಿಲ್ಲ. ಶಾಸಕರು ಹೇಳಿದ ತಕ್ಷಣ ಅಲ್ಲಿ ಭೇಟಿ ನೀಡಿ 18 ಲಕ್ಷ ರೂ. ಅನುದಾನ ನೀಡಿದ್ದಾರೆ ಎಂದು ಹೇಳಿದರು.

ವೀಣಾ ಕೊಡ್ಲಿ, ಅಕ್ಕಮ್ಮ ಹೆಗಡೆ, ರಾಮನಗೌಡ ಶೆಟ್ಟನಗೌಡರ, ಚೇತನ್ ಬರದ್ವಾಡ, ಮುತ್ತು ಹೆಬ್ಬಳ್ಳಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net