ಗುಡ್ಡದ ಕಲ್ಲು ಕುಸಿದು ಯೋಧ ದುರ್ಮರಣ

5ark-1, mallesh
Published on

ಅರಕಲಗೂಡು: ಅರುಣಾಚಲಪ್ರದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಸಾವಿಗೀಡಾಗಿದ್ದು, ಸ್ವಗ್ರಾಮ ತಾಲೂಕಿನ ಅತ್ನಿ ದಾಖಲೆಯ ಸಿದ್ದಾಪುರದಲ್ಲಿ ನೀರವ ಮೌನ ಆವರಿಸಿದೆ.

ದಿ.ಮಲ್ಲೇಗೌಡ ಮತ್ತು ಪುಟ್ಟಮ್ಮ ಅವರ ಕಿರಿಯ ಪುತ್ರ ಹವಾಲ್ದಾರ್ ಮಲ್ಲೇಶ್(38) ಮೃತ ಯೋಧ. ಭಾರತೀಯ ಸೇನೆಯಲ್ಲಿ 17 ವರ್ಷಗಳಿಂದ ಸೈನಿಕರಾಗಿ ಸೇವೆ ಸಲ್ಲಿಸಿರುವ ಮಲ್ಲೇಶ್ ಅವರ ಸೇವಾ ಅವಧಿ ಮುಗಿದಿದ್ದರೂ ದೇಶ ಸೇವೆ ಮಾಡುವ ಹಂಬಲದಿಂದ ಮತ್ತೆ ಸೇನೆಯಲ್ಲಿ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶನಿವಾರ ಸಂಜೆ ಅರುಣಾಚಲಪ್ರದೇಶದ ಚೀನಾ ಗಡಿಯಲ್ಲಿ ಗುಡ್ಡದ ಕಲ್ಲು ಕುಸಿದು ತೀವ್ರವಾಗಿ ಗಾಯಗೊಂಡಿದ್ದರು. ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಯೋಧನ ಸ್ವಗ್ರಾಮದಲ್ಲಿ ಮೌನ ಮನೆ ಮಾಡಿದ್ದು, ದುಃಖದ ಮಡುವಿನಲ್ಲಿ ಮುಳುಗಿರುವ ಕುಟುಂಬಸ್ಥರ ರೋದನ ಮನ ಹಿಂಡುತ್ತಿತ್ತು. ಇನ್ನೆರಡು ವರ್ಷ ದೇಶ ಸೇವೆ ಮಾಡಿ ಬರುವುದಾಗಿ ಹೋಗಿದ್ದ ಮಗ ಮತ್ತೆ ಮನೆಗೆ ಬಾರದಾಗಿರುವುದು ನಂಬಲು ಅಸಾಧ್ಯವಾಗಿದೆ ಎಂದು ಯೋಧನ ತಾಯಿ ಕಣ್ಣೀರಾದರು.

ಸೋಮವಾರ ಸಂಜೆ ಇಲ್ಲವೆ, ಮಂಗಳವಾರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಯೋಧ ಮಲ್ಲೇಶ್ ಮಾರ್ಚ್‌ನಲ್ಲಿ 15 ದಿನ ರಜೆ ಮೇಲೆ ಗ್ರಾಮಕ್ಕೆ ಬಂದು ನಂತರ ಕರ್ತವ್ಯಕ್ಕೆ ಮರಳಿದ್ದರು. ಅವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net