ನಾಮಪತ್ರ ಸಲ್ಲಿಕೆ ಮೊದಲ ದಿನವೇ ವಾಕ್ಸಮರ

FotoJet 33333
Published on

ಬಂಗಾರಪೇಟೆ ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಗೆ 12ರಂದು ಚುನಾವಣೆ

ಬಂಗಾರಪೇಟೆ: ಸ್ಥಳಿಯ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿಗೆ ಅ.12ರಂದು ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಶನಿವಾರ ಆರಂಭವಾದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೇಳೆ ಚುನಾವಣಾಧಿಕಾರಿ ಎದುರಲ್ಲೇ ಇಬ್ಬರು ಅಭ್ಯರ್ಥಿಗಳ ಜಟಾಪಟಿ ನಡೆಸಿದರು.

ಬೆಳಗ್ಗೆ 11 ಗಂಟೆಯಿಂದ ಆರಂಭಗೊಂಡ ನಾಮಪತ್ರ ಸಲ್ಲಿಕೆಗೆ ತಾ ಮುಂದು, ನಾ ಮುಂದು ಎಂದು ಆಕಾಂ ಮಂಜುನಾಥ್​ರೆಡ್ಡಿ ಮತ್ತು ಟಿಎಪಿಸಿಎಂಎಸ್​ ಮಾಜಿ ಅಧ್ಯಕ್ಷ ಜಿ.ರಾಜಾರೆಡ್ಡಿ ಚುನಾವಣಾ ಅಧಿಕಾರಿಗಳ ಕೊಠಡಿಯಲ್ಲಿ ಕುಳಿತಿದ್ದರು. ಈ ಮಧ್ಯೆ ಮಂಜುನಾಥ್​ರೆಡ್ಡಿ ಹೊರಗಡೆ ಬಂದು ಒಳಗೆ ಹೋಗುವಷ್ಟರಲ್ಲಿ ರಾಜಾರೆಡ್ಡಿ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ನೀಡಿದ್ದರು. ಇದನ್ನು ಗಮನಸಿದ ಮಂಜುನಾಥ್​ರೆಡ್ಡಿ, ಮೊದಲು ನಾನು ಬಂದಿದ್ದರೂ ಹೇಗೆ ರಾಜಾರೆಡ್ಡಿ ನಾಮಪತ್ರ ತೆಗೆದುಕೊಂಡಿದ್ದೀರಿ?, 11 ಗಂಟೆಗೆ ಇನ್ನೂ 3 ನಿಮಿಷ ಇರುವಾಗ ನಾಮಪತ್ರ ಪಡೆಯಬಹುದೇ?, ಚುನಾವಣೆ ನಿಯಮ ಏಕೆ ಪಾಲಿಸುತ್ತಿಲ್ಲ ಎಂದು ಚುನಾವಣಾಧಿಕಾರಿ ಬಾಲಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

11 ಗಂಟೆಗೂ ಮೊದಲು ಸಲ್ಲಿಸಿದ ನಾಮಪತ್ರ ಹಿಂದಿರುಗಿಸಿ ನನ್ನ ನಾಮಪತ್ರ ಮೊದಲು ಸ್ವೀಕರಿಸಬೇಕು ಎಂದು ಪಟ್ಟು ಹಿಡಿದರು. ರಾಜಾರೆಡ್ಡಿ ಸಮಯಕ್ಕೆ ಸರಿಯಾಗಿ ನಾಮಪತ್ರ ಸಲ್ಲಿಸಿದ್ದರಿಂದ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಚುನಾವಣಾ ಅಧಿಕಾರಿ ಸ್ಪಷ್ಟಪಡಿಸಿದರು.

ಈ ವೇಳೆ ನಾಮಪತ್ರ ಸಲ್ಲಿಸುವಾಗ ಡೆಪಾಸಿಟ್​ ಹಣದ ರಸೀದಿಯೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ ಎಂದು ಹೇಳುವ ಮೂಲಕ ರಾಜಾರೆಡ್ಡಿ ಮಧ್ಯ ಪ್ರವೇಶಿಸಿದರು. ನಾಮಪತ್ರ ಸಲ್ಲಿಸುವಾಗ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಅಭ್ಯರ್ಥಿ ಡೆಪಾಸಿಟ್​ ಕಟ್ಟಬೇಕು, ಅದಕ್ಕೂ ಮುಂಚೆ ಕಟ್ಟಲು ಹೇಗೆ ಸಾಧ್ಯ ಎಂದು ಮಂಜುನಾಥ್​ರೆಡ್ಡಿ ಗರಂ ಆದರು.

ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದ ಇತರ ಅಭ್ಯರ್ಥಿಗಳು ಇಬ್ಬರನ್ನೂ ಸಮಧಾನಪಡಿಸಿದರು.

ಮೂವರ ಉಮೇದುವಾರಿಕೆ:ಮೊದಲ ದಿನ ಬಿ&ವರ್ಗದಿಂದ ಸಾಮಾನ್ಯ ಕ್ಷೇತಕ್ಕೆ ಜಿ.ರಾಜಾರೆಡ್ಡಿ, ಮಂಜುನಾಥ್​ ರೆಡ್ಡಿ ಮತ್ತು ಎಸ್ಸಿ ಮೀಸಲು ಸ್ಥಾನದಿಂದ ಎಂ.ಆರ್​.ಸಂತೋಷ್​ ಕುಮಾರ್​ ನಾಮಪತ್ರ ಸಲ್ಲಿಸಿದರು. ಕೊನೆ ದಿನವಾದ ಭಾನುವಾರ ಕಾಂಗ್ರೆಸ್​ ಮತ್ತು ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net