ಶಾಸಕ ಚನ್ನಬಸಪ್ಪ, ಎಂಎಲ್‌ಸಿ ಬಲ್ಕಿಷ್ ಬಾನು ಮಧ್ಯೆ ವಾಕ್ಸಮರ

sequirity
ಕೆಡಿಪಿ ಸಭೆ ನಡೆಯುವ ಸಭಾಂಗಣದ ಹೊರಗೆ ಭದ್ರತೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿ.
Published on

ಶಿವಮೊಗ್ಗ: ಐದು ತಿಂಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆ ಕಹಿ ಘಟನೆಯೊಂದಕ್ಕೆ ಸಾಕ್ಷಿಯಾಯಿತು. ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯೆ ನಡುವೆ ಆರಂಭವಾದ ವಾಗ್ವಾದ ಬಳಿಕ ಸಚಿವರವರೆಗೂ ತಲುಪಿತು.

ಸಭೆ ಆರಂಭದ ಸುಮಾರು ಎರಡು ತಾಸು ಎಲ್ಲವೂ ಸುಗಮವಾಗಿ ನಡೆಯಿತು. ಆದರೆ ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಕೇಳಿದ ಅದೊಂದು ಪ್ರಶ್ನೆ ಶಾಸಕ ಎಸ್.ಎನ್.ಚನ್ನಬಸಪ್ಪ ಅವರನ್ನು ಕೆರಳಿಸಿತು. ಇದು ವಾಗ್ವಾದಕ್ಕೆ ಕಾರಣವಾಗಿ, ಏಕವಚನ ಪದ ಪ್ರಯೋಗವೂ ನಡೆಯಿತು.

ಶಿವಮೊಗ್ಗದಲ್ಲಿ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ನಿರ್ಮಾಣಕ್ಕೆ ಸ್ಥಳ ಗುರುತಿಸುವ ಸಂಬಂಧ ಗಂಭೀರವಾದ ಚರ್ಚೆ ನಡೆಯಿತು. ಇದೇ ವಿಷಯಕ್ಕೆ ಸಲಹೆ ನೀಡಲು ಮುಂದಾದ ಬಲ್ಕಿಷ್ ಬಾನು, ಇವರು (ಚನ್ನಬಸಪ್ಪ) ಸಭೆಯಲ್ಲಿ ಭಾಗವಹಿಸಬಹುದೆ? ಎನ್ನುವ ಮೂಲಕ ಪರೋಕ್ಷವಾಗಿ ವಿಧಾನಸಭೆ ಸ್ಪೀಕರ್ ಖಾದರ್ ಅವರು ಅಧಿವೇಶನದಿಂದ ಅಮಾನತು ಮಾಡಿದ್ದನ್ನು ಪ್ರಶ್ನಿಸಿದರು.

ಬಲ್ಕಿಷ್ ಬಾನು ಈ ರೀತಿ ಪ್ರಶ್ನೆ ಮಾಡಿದ್ದು ಸಭೆಯ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದ ಮಧು ಬಂಗಾರಪ್ಪ ಅವರನ್ನು. ಇದಕ್ಕೆ ಕೆರಳಿದ ಚನ್ನಬಸಪ್ಪ, ಈ ರೀತಿ ಮಾತನಾಡಿ ನನಗೆ ಅವಮಾನ ಮಾಡುತ್ತಿದ್ದೀರಿ. ನನ್ನನ್ನು ಏನೆಂದು ತಿಳಿದಿದ್ದೀರಿ? ಎಲ್ಲಿಗೆ ಹೋಗಬೇಕು, ಹೋಗಬಾರದು ಎಂಬುದು ನನಗೆ ಚೆನ್ನಾಗಿ ಗೊತ್ತು ಎಂದು ತರಾಟೆಗೆ ತೆಗೆದುಕೊಂಡರು.

ಇಬ್ಬರನ್ನೂ ಸಮಾಧಾನಪಡಿಸಿದ ಮಧು ಬಂಗಾರಪ್ಪ ಸಭೆಯನ್ನು ಹೇಗೋ ಮುಂದುವರಿಸುವ ಯತ್ನದಲ್ಲಿದ್ದರು. ಅಷ್ಟೊತ್ತು ಸುಮ್ಮನಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಎದ್ದು ನಿಂತು ಅವರು (ಬಲ್ಕಿಷ್ ಬಾನು) ಹೆಚ್ಚು ಅನುಭವಿಗಳಲ್ಲ. ಏನೋ ಕೇಳಿದ್ದಾರೆ. ನೀವು ಅವರ ಮೇಲೆ ರೇಗುವುದು ಸರಿಯಲ್ಲ. ಆಕೆ ಹೆಣ್ಣು ಮಗಳು ಎಂದು ಚನ್ನಬಸಪ್ಪ ಅವರಿಗೆ ಬುದ್ಧಿಮಾತು ಹೇಳಲು ಮುಂದಾದರು. ಇದು ಚೆನ್ನಿ ಅವರನ್ನು ಮತ್ತೆ ಕೆಣಕಿದಂತಾಯಿತು. ಆಕೆ ನನ್ನ ಬಗ್ಗೆ ಮಾತನಾಡುವಾಗ ನೀವು ಸುಮ್ಮನಿದ್ರಿ. ಈಗ ನನಗೆ ಬುದ್ಧಿ ಹೇಳುತ್ತಿದ್ದೀರಿ. ನನಗೆ ಅವಮಾನವಾಗಿದೆ. ನೀವೇ ಸಭೆ ಮಾಡಿಕೊಳ್ಳಿ. ನಾನು ಹೊರಗೆ ಹೋಗುತ್ತೇನೆ ಎಂದು ಕೈನಲ್ಲಿದ್ದ ಕಡತವನ್ನು ಟೇಬಲ್ ಮೇಲೆ ಕುಕ್ಕಿದರು.

ಇದರಿಂದ ತಾಳ್ಮೆ ಕಳೆದುಕೊಂಡ ಮಧು ಬಂಗಾರಪ್ಪ, ನಿಮಗೆ ಹೇಳುವುದು ಸಾಧ್ಯವಿಲ್ಲ. ಆಕೆ ನನ್ನನ್ನು ಕೇಳಿದ್ದಾರೆ. ನಾನು ಅವರಿಗೆ ವಿವರಣೆ ನೀಡಿದ್ದೇನೆ. ಇಷ್ಟಕ್ಕೇ ಅವಮಾನವಾಯಿತು ಎಂದು ನೀವು ಹೊರಗೆ ಹೋಗುವುದಾದರೆ ನಾನೇನೂ ಮಾಡಲು ಸಾಧ್ಯವಿಲ್ಲ ಎಂದರು.

ಮಧ್ಯ ಪ್ರವೇಶಿಸಿದ ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಇಲ್ಲಿ ಎಲ್ಲರೂ ಪರಿಚಿತರು. ಎಲ್ಲರ ನಡುವೆ ಸಲುಗೆಯಿದೆ. ಹೀಗಾಗಿ ತಮಾಷೆಗಾಗಿ, ಸಲುಗೆಯಿಂದ ಆಡುವ ಮಾತುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು. ನಂತರ ಸಭೆ ಹಳಿಗೆ ಮರಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net