

ಆರ್.ಕೃಷ್ಣ ಮೈಸೂರು
ನಗರದಲ್ಲಿ ತಲೆ ಎತ್ತಬೇಕಿದ್ದ ‘ಯುದ್ಧ ಸ್ಮಾರಕ’ ನಿರ್ಮಾಣ ಕಾಮಗಾರಿ ಎರಡೂವರೆ ವರ್ಷ ಕಳೆದರೂ ಇನ್ನೂ ಕುಂಟುತ್ತಾ ಸಾಗಿದ್ದು, ಗ್ರಹಣ ಹಿಡಿದಿದೆ.
ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಸ್ಮಾರಕ ನಿರ್ಮಿಸಬೇಕು ಎನ್ನುವ ಉದ್ದೇಶದಿಂದ ಕಾಮಗಾರಿ ಆರಂಭಿಸಿದ್ದರೂ ಇನ್ನು ಕುಂಟುತ್ತ ಸಾಗಿದೆ.
ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ 1.47 ಕೋಟಿ ರೂ. ವೆಚ್ಚದಲ್ಲಿ ಯುದ್ಧ ಸ್ಮಾರಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಲೋಕೋಪಯೋಗಿ ಇಲಾಖೆ ಕಾಮಗಾರಿ ನಡೆಸುತ್ತಿದ್ದು, ಸ್ಮಾರಕದ ತಳ ಅಂತಸ್ತು, ಸ್ಮಾರಕ ಗೋಪುರದ ಒಂದು ಕಂಬ ನಿರ್ಮಾಣಗೊಂಡಿದ್ದು ಬಿಟ್ಟರೆ ಉಳಿದ ಕಾಮಗಾರಿ ಸ್ಥಗಿತಗೊಂಡಿದೆ. ತಳ ಅಂತಸ್ತು ಬಳಿಕ ಕಂಬಗಳ (ಪಿಲ್ಲರ್) ನಿರ್ಮಾಣ ಕಾರ್ಯ ನಡೆಯಬೇಕಿತ್ತು. ಆದರೆ ಅದು ಪಾಳು ಬಿದ್ದು ಆಸ್ತಿ ಪಂಜರದಂತೆ ನಿಂತಿದೆ.
ಕಾಮಗಾರಿಗೆ ಯೋಜನೆ ವೆಚ್ಚ ಹೆಚ್ಚಾಗಿದ್ದರಿಂದ ಪರಿಷ್ಕೃತ ಯೋಜನಾ ವೆಚ್ಚವನ್ನು ಹೆಚ್ಚಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಬಳಿಕ ವೆಚ್ಚವನ್ನು 1.47 ಕೋಟಿ ರೂ.ಗೆ ಏರಿಕೆ ಮಾಡಿದ್ದಲ್ಲದೆ ಸೈನಿಕರ ಮೇಲಿನ ಗೌರವದಿಂದ ಕೆಲ ದಾನಿಗಳು ಕಾಮಗಾರಿಗೆ ಬೇಕಾದ ವಸ್ತ್ತುಗಳು, ಧನ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಇಷ್ಟಾಗಿಯೂ ಕಾಮಗಾರಿ ಮಾತ್ರ ನಿಂತಲ್ಲೇ ನಿಂತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆಯು ಪಾರಂಪರಿಕ ಶೈಲಿಯಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದೆ.
2023ರ ಜುಲೈ 26ರ ಕಾರ್ಗಿಲ್ ವಿಜಯ ದಿನದಂದೇ ಕಾಮಗಾರಿ ಪೂರ್ಣಗೊಳ್ಳುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ವರ್ಷಗಳು ಉರುಳಿದರೂ ಯೋಜನೆಯು ಅದೇ ಸ್ಥಿತಿಯಲ್ಲಿ ನಿಂತಿರುವುದು ವಿಪರ್ಯಾಸವಾಗಿದೆ.
ಯುದ್ಧ ಸ್ಮಾರಕ ನಿರ್ಮಾಣ ಮಾಜಿ ಯೋಧರ ದಶಕದ ಕನಸಾಗಿದ್ದು, 24 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಮನವಿ ಸಲ್ಲಿದ್ದರು. ಯುದ್ಧ ಸ್ಮಾರಕ ಪೂರ್ಣಗೊಂಡರೆ ನಗರದ ಆಕರ್ಷಣೆಯ ಕೇಂದ್ರ ಬಿಂದುಗಳಲ್ಲಿ ಒಂದಾಗಲಿದ್ದು, ಮಡಿದ ಸೈನಿಕರಿಗೆ ಗೌರವ ಸಲ್ಲಿಸಿದಂತಾಗುತ್ತದೆ.
ಹೇಗಿರಲಿದೆ ಯುದ್ಧ ಸ್ಮಾರಕ:
ಪಾರಂಪರಿಕ ಶೈಲಿಯಲ್ಲಿಯೇ ನಿರ್ಮಾಣಗೊಳ್ಳಲಿರುವ ಸ್ಮಾರಕ ಚೌಕಾಕಾರದಲ್ಲಿ ನಿರ್ಮಿಸಲಾಗುತ್ತದೆ. ಒಂದು ಭಾಗದಲ್ಲಿ ಮೂರು ವಿಧದ ಸೈನ್ಯದ ಸಂಕೇತದೊಂದಿಗೆ ದ್ವಾರ ನಿರ್ಮಿಸಲಾಗುತ್ತದೆ.
ಉಳಿದ ಮೂರು ಬದಿಯಲ್ಲಿ ಭೂ ಸೇನೆ, ವಾಯು ಸೇನೆ, ನೌಕಾದಳದ ಮಹತ್ವ ಸಾರುವ ಯುದ್ಧ ಟ್ಯಾಂಕರ್‌ಗಳು, ಯುದ್ಧ ವಿಮಾನಗಳು, ನೌಕೆ, ರೈಫಲ್ ಸೇರಿದಂತೆ ಯುದ್ಧದಲ್ಲಿ ಬಳಸುವ ಪರಿಕರಗಳನ್ನು ಪ್ರದರ್ಶನಕ್ಕಿಡಲು ನಿರ್ಧರಿಸಲಾಗಿದೆ.
ಇದಕ್ಕಾಗಿ ಸರ್ಕಾರದಿಂದ ರಕ್ಷಣಾ ಇಲಾಖೆಗೆ ಪತ್ರ ಬರೆದು ಟ್ಯಾಂಕರ್, ರೈಫಲ್ ಸೇರಿದಂತೆ ಇನ್ನಿತರ ಪರಿಕರಗಳನ್ನು ತರಲು ಪ್ರಯತ್ನಿಸಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಪ್ರತಿಕ್ರಿಯೆ ಬಂದಿದ್ದು, ಸಾಮಗ್ರಿಗಳ ಸಾಗಣೆ ವೆಚ್ಚವನ್ನು ಇಲಾಖೆ ಭರಿಸಬೇಕಿದೆ.
ಯುದ್ಧ ಸ್ಮಾರಕವು 4 ಚದರ ಅಡಿ ವಿಸ್ತೀರ್ಣವಿದ್ದು ಒಟ್ಟು 48 ಅಡಿ ಎತ್ತರ ಬರಲಿದೆ. 33 ಅಡಿ ಎತ್ತರ ಸ್ತಂಭ ರಾಷ್ಟ್ರ ಲಾಂಛನ ಇರಲಿದೆ. ಅದಕ್ಕೂ ಮುನ್ನ 10 ಅಡಿ ಫೌಂಡೇಷನ್ ಇರುತ್ತದೆ. ಕಲ್ಲಿನ ಮೇಲೆ 5 ಅಡಿ ಎತ್ತರ ಅಶೋಕ ಲಾಂಛನ ಅಳವಡಿಸಲಾಗುತ್ತದೆ. ದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿರುವ ಸಾರನಾಥ ಅಶೋಕ್ ಲಾಂಛನ ಅನ್ನು ಮೈಸೂರಿನ ಯುದ್ಧ ಸ್ಮಾರಕದಲ್ಲಿ ಅಳವಡಿಸಲಾಗುತ್ತದೆ.
ಸ್ಮಾರಕಕ್ಕೆ ಬಳಸುವ ಕಲ್ಲಿಗೆ ಪಾಲಿಶ್ ಮಾಡಿದ ನಂತರ ಅಮೆರಿಕನ್ ವೈಟ್ ಪೇಯಿಂಟ್‌ನಿಂದ ಅಕ್ಷರ ಬರೆಯುವುದರಿಂದ ಬಹು ವರ್ಷದವರೆವಿಗೂ ಅಕ್ಷರ ಮಾಸುವುದಿಲ್ಲ. ಪಾಲಿಶ್ ಮಾಡಿದ ನಂತರ ಜೆಟ್ ಬ್ಲಾಕ್ ಕಲರ್ ಆಗುತ್ತದೆ.
ದಾನಿಗಳಿಂದ ಸಹಾಯ ಹಸ್ತ:
ಸ್ಮಾರಕ ನಿರ್ಮಾಣಕ್ಕೆ ಚಾಮರಾಜನಗರದ ಅಮಚವಾಡಿಯ ಪಟೇಲ್ ಪುಟ್ಟಮಾದಯ್ಯ ಅವರು ಸುಮಾರು ಒಂದು ಕೋಟಿ ರೂ. ಮೌಲ್ಯದ ಕಪ್ಪು ಶಿಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಅಲ್ಲದೆ ಶ್ರೀನಾಥ್ ಅವರು 200 ಟನ್‌ನಷ್ಟು ಕಲ್ಲುಗಳನ್ನು ನೀಡಿದ್ದಾರೆ. ಹಾಸನದ ದಾನಿಯೊಬ್ಬರು 25 ಲಕ್ಷ ರೂ. ಮೌಲ್ಯದ ಹಾಸನದ ಹಸಿರು ಗ್ರಾನೈಟ್ ಕಲ್ಲುಗಳನ್ನು ಕೊಡುಗೆ ನೀಡಲು ಮುಂದೆ ಬಂದಿದ್ದಾರೆ. ಈ ಕಲ್ಲುಗಳ ಮೌಲ್ಯ ಅಂದಾಜು 1.5 ಕೋಟಿ ರೂ.ಗೂ ಹೆಚ್ಚಿಗೆ ದಾಟುತ್ತದೆ ಎನ್ನಲಾಗಿದೆ.
ಲೋಕೋಪಯೋಗಿ ಇಲಾಖೆಗೆ ಈಗ 55 ಲಕ್ಷ ರೂ. ಅನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ಹಂತದ ಕಾಮಗಾರಿಗೆ 91 ಲಕ್ಷ ರೂ. ಹಣ ಬಿಡುಗಡೆಗೆ ಪ್ರಸ್ತಾವ ಕಳುಹಿಸುವುದು ಬಾಕಿ ಇದೆ. ಅದಲ್ಲದೆ ಉದ್ಯಾನದ ಅಭಿವೃದ್ಧಿಗೆ ಮುಡಾ ಹಾಗೂ ಪಾಲಿಕೆ ನೆರವನ್ನು ಪಡೆಯಲು ಯೋಜಿಸಲಾಗಿದೆ. ಆದರೆ ಸಿವಿಲ್ ಕಾಮಗಾರಿಯೇ ಇನ್ನು ಪೂರ್ಣಗೊಳ್ಳದೆ ಇರುವುದರಿಂದ ನಿವೃತ್ತ ಯೋಧರ ಕನಸು ಇನ್ನು ಕನಸಾಗಿಯೇ ಉಳಿದಿದೆ.
===========
ಪಿಡಬ್ಲುೃಡಿಗೆ ಪತ್ರ ಬರೆಯಲಾಗಿದೆ
ಕಾಮಗಾರಿ ಹೊಣೆಯನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದೆ. ಆರಂಭಿಕ ಹಂತದಲ್ಲಿ 55 ಲಕ್ಷ ರೂ. ಅನ್ನು ಬಿಡುಗಡೆ ಮಾಡಿದ್ದು, ಅಡಿಪಾಯ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಮುಂದಿನ ಹಂತದ ಕಾಮಗಾರಿ ಸ್ಥಗಿತಗೊಂಡಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನ ಮೇರೆಗೆ ಇಲಾಖೆಗೆ ಪತ್ರ ವ್ಯವಹಾರ ನಡೆಸಲಾಗಿದೆ. ಅಲ್ಲದೆ ಶೀಘ್ರದಲ್ಲೇ ಸಭೆ ನಡೆಸಿ ಕಾಮಗಾರಿ ಆರಂಭಿಸಲು ಕ್ರಮವಹಿಸಲಿದ್ದಾರೆ.
ಎಂ.ಡಿ.ಸುದರ್ಶನ್
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ