ಯುದ್ಧದ ನೆಲದಿಂದ ತಾಯ್ನಡಿಗೆ ಬಂದ ವಿದ್ಯಾರ್ಥಿ: ಕಲ್ಲೂರು ಗ್ರಾಮದ ಸಂಗಮೇಶ ಆಗಮನಕ್ಕೆ ಕುಟುಂಬಸ್ಥರು, ಊರ ಜನರ ಹರ್ಷ

030322 Kalluru Sangamesh Return fro Ukraine
ಯೂಕ್ರೇನ್‌ದಿಂದ ಸುರಕ್ಷಿತವಾಗಿ ಮರಳಿದ ಸಂಗಮೇಶಗೆ ತಾಯಿ ಚನ್ನಮ್ಮ ಸೊಪ್ಪಿಮಠ ಆರತಿ ಬೆಳಗುತ್ತಿರುವುದು. ಸಂಗಮೇಶ ಸೊಪ್ಪಿಮಠಗೆ ಸನ್ಮಾನ ಮಾಡಿದ ತಹಸೀಲ್ದಾರ್ ಶ್ರೀಶೈಲ ತಳವಾರ.
Published on

ಕೊಪ್ಪಳ: ಯೋಧನಲ್ಲದಿದ್ದರೂ ಯದ್ಧ ಭೂಮಿಯಿಂದ ಮರಳಿ ಬಂದ ಮಗನನ್ನು ಕಂಡು ಭಾವುಕರಾದ ಪಾಲಕರು, ಗೆಳೆಯನನ್ನು ಕಂಡು ಹರ್ಷಪಟ್ಟ ಸ್ನೇಹಿತರು, ಗ್ರಾಮಸ್ಥರು, ತಮ್ಮೂರಿನ ಯುವಕನನ್ನು ಕರೆಸಿಕೊಂಡ ಖುಷಿಯಲ್ಲಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು. ಈ ಎಲ್ಲ ಘಟನೆಗಳಿಗೆ ಸಾಕ್ಷಿಯಾಗಿದ್ದು ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಸಂಗಮೇಶ ಸೊಪ್ಪಿಮಠ ಮನೆ.

ಮೆಡಿಕಲ್ ಅಭ್ಯಾಸಕ್ಕೆಂದು ತೆರಳಿದ್ದ ಸಂಗಮೇಶ ಯೂಕ್ರೇನ್‌ನ ವಿನಿಸ್ಚಿಯಾ ಮೆಡಿಕಲ್ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ಅಭ್ಯಾಸ ಮಾಡುತ್ತಿದ್ದು, 6 ತಿಂಗಳ ಹಿಂದಷ್ಟೇ ಸ್ವಗ್ರಾಮಕ್ಕೆ ಬಂದು ಮತ್ತೆ ಅಲ್ಲಿಗೆ ತೆರಳಿದ್ದರು. ಮೂರು ತಿಂಗಳು ಕಳೆದಿದ್ದರೆ, ಮೂರು ವರ್ಷದ ಕೋರ್ಸ್ ಮುಗಿಯುತ್ತದೆಂಬ ಕಾರಣಕ್ಕೆ ಅಲ್ಲೇ ಉಳಿದಿದ್ದ. ಯುದ್ಧ ಸನ್ನಿವೇಶ ಹೆಚ್ಚಿದ ಕಾರಣ ಐದು ದಿನ ಬಂಕರ್‌ನಲ್ಲಿ ಕಳೆದು, ಕೊನೆಗೂ ಸ್ವಗ್ರಾಮಕ್ಕೆ ಮರಳಿದ್ದಾರೆ.

ಬೆಂಗಳೂರಿಗೆ ತೆರಳಿದ ಪಾಲಕರು ಆತನನ್ನು ಸ್ವಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾರೆ. ಸಂಗಮೇಶನನ್ನು ಕರೆಸಿಕೊಳ್ಳಲು ಶ್ರಮಿಸಿದ ಸಂಸದ ಸಂಗಣ್ಣ ಕರಡಿ, ಸಚಿವ ಹಾಲಪ್ಪ ಆಚಾರ್, ಮುಖಂಡ ನವೀನ್ ಗುಳಗಣ್ಣನವರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಬಳಿಕ ಗ್ರಾಮದ ಕಲ್ಲಿನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದು ಮನೆಗೆ ಮರಳಿದರು.

ಪ್ರಯಾಣದ ಸನ್ನಿವೇಶ ಬಿಚ್ಚಿಟ್ಟ ಯುವಕ
ಪಶ್ಚಿಮ ಯೂಕ್ರೇನ್‌ನಲ್ಲಿದ್ದ ಕಾರಣ ನಾವು ಸುಲಭವಾಗಿ ಗಡಿ ದಾಟಲು ಅನುಕೂಲವಾಯಿತು. ಖಾರ್ಕಿವ್, ಕೀವ್ ಪ್ರದೇಶದಲ್ಲಿ ದೇಶದ ಸಾವಿರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರನ್ನು ಕೇಂದ್ರ ಸರ್ಕಾರ ಬೇಗನೆ ಕರೆಸಿಕೊಳ್ಳಬೇಕು. ಐದು ದಿನ ಬಂಕರ್‌ನಲ್ಲಿದ್ದೆ. ಬಳಿಕ ಕೆಲ ಕಿಮೀ ದೂರದವರೆಗೆ ನಡೆದು, ಟ್ರೇನ್‌ನಲ್ಲಿ ಪ್ರಯಾಣಿಸಿದ್ದೇನೆ. ಹಂಗೇರಿ ಮೂಲಕ ದೆಹಲಿಗೆ ಆಗಮಿಸಿದೆ. ರಾಜ್ಯ ಸರ್ಕಾರ ಬೆಂಗಳೂರಿನವರೆಗೆ ಉಚಿತವಾಗಿ ನಮ್ಮನ್ನು ಕರೆಸಿಕೊಂಡಿದೆ ಎಂದು ಸಂಗಮೇಶ ವಿವರಿಸಿದರು.

ಭಾರತದಲ್ಲಿ ಮೆಡಿಕಲ್ ಕಲಿಕೆ ಸುಲಭವಿಲ್ಲ. ಹೀಗಾಗಿ ನಾವು ಬೇರೆ ದೇಶಗಳಿಗೆ ಹೋಗುವಂತಾಗಿದೆ. ನಮ್ಮ ವಿದ್ಯಾಭ್ಯಾಸಕ್ಕೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು. ನಮ್ಮ ಇತರ ಸ್ನೇಹಿತರನ್ನು ಸುರಕ್ಷಿತವಾಗಿ ಬೇಗನೆ ಕರೆಸಿಕೊಳ್ಳಬೇಕು. ನನ್ನನ್ನು ಕುಟುಂಬದವರೊಂದಿಗೆ ಸೇರಿಸಿದ ಕೇಂದ್ರ, ರಾಜ್ಯ ಸರ್ಕಾರ, ಸಚಿವ ಹಾಲಪ್ಪ, ಸಂಸದ ಸಂಗಣ್ಣ ಕರಡಿ, ಮುಖಂಡ ನವೀನ್ ಸಹಾಯಸ್ತ ಮರೆಯುವುದಿಲ್ಲ.| ಸಂಗಮೇಶ ಸೊಪ್ಪಿಮಠ ಯೂಕ್ರೇನ್‌ನಿಂದ ಸ್ವಗ್ರಾಮಕ್ಕೆ ಮರಳಿದ ಯುವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net