

ಸಿರವಾರ: ನೀರಿನ ಸಮಸ್ಯೆ ನೀಗಿಸಲು ಕೊಳವೆ ಬಾವಿ ಕೊರೆಸಲು 5 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ತಿಮ್ಮಪ್ಪ ಜಗಲಿ ತಿಳಿಸಿದರು. ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮುಖ್ಯವಾಗಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಾಗೂ ಬಂಗಾರಪ್ಪ ಕೆರೆಯಿಂದ ನೀರು ತರಲು ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು. ಪಂಚಾಯಿತಿ ವಾಹನಗಳ ಚಾಲಕರಿಗೆ ಸಂಬಳ ನಿಗದಿ ಹಾಗೂ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆಗಾಗಿ ಅನುದಾನ ಮೀಸಲಾಗಿಡಲಾಗುವುದು. 84 ವೈಯಕ್ತಿಕ ಶೌಚಗೃಹಗಳು ಮಂಜೂರಾಗಿವೆ. ಹೆಚ್ಚುವರಿಯಾಗಿ ಒಂದು ಸಾವಿರ ವೈಯಕ್ತಿಕ ಶೌಚಗೃಹಗಳಿಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.
ಇದನ್ನೂ ಓದಿ: ಅಬಕಾರಿ ಅಕ್ರಮ ತಡೆಗೆ ಕಂಟ್ರೋಲ್ ರೂಮ್
ಶವ ಸಾಗಣೆ ವಾಹನ ಖರೀದಿ, ರುದ್ರಭೂಮಿಗೆ ತೆರಳುವ ರಸ್ತೆ ನಿರ್ಮಾಣಕ್ಕೆ ಅನುದಾನ, ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣ, ಮಹಿಳೆಯರಿಗೆ ಕಂಪ್ಯೂಟರ್ ಹಾಗೂ ಹೊಲಿಗೆ ಯಂತ್ರ ತರಬೇತಿ, 50 ಹೈಮಾಸ್ಟ್ ದೀಪ ಅಳವಡಿಕೆ ಸೇರಿ ಹಲವು ಬೇಡಿಕೆಗಳು ಸಭೆಯಲ್ಲಿ ಜನರಿಂದ ಸಲ್ಲಿಕೆಯಾದವು. ಮುಖಂಡರಾದ ಗ್ಯಾನಪ್ಪ, ಮಲ್ಲಪ್ಪ, ರಂಗನಾಥ್ ಭೋವಿ, ಬಂದೇನವಾಜ್, ಯಂಕಪ್ಪ ಗುಜ್ಜಲ, ಕಂದಾಯ ನಿರೀಕ್ಷಕ ಭೀಮರಾಯ, ಪಪಂ ಸಿಬ್ಬಂದಿ ಜೆ.ಇ.ಮಹಮ್ಮದ್ ಹುಸೇನ್, ಲಕ್ಷ್ಮೀ, ಸುನೀತಾ ಸಜ್ಜನ್ ಇತರರಿದ್ದರು.