ಅನಧಿಕೃತ ಬಡಾವಣೆಗಳ ವಿರುದ್ಧ ಸಮರ, ಜಿಲ್ಲಾಧಿಕಾರಿ ಸೂಚನೆ, ತಹಸೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ

shivaraj
Published on

ಬೆಂಗಳೂರು ಗ್ರಾಮಾಂತರ

ಜಿಲ್ಲೆಯಲ್ಲಿ ಅನಧಿಕೃತ ಬಡಾವಣೆಗಳ ವಿರುದ್ಧ ಸಮರ ಸಾರಿರುವ ಜಿಲ್ಲಾಡಳಿತ ಅಕ್ರಮ ಲೇಔಟ್‌ಗಳನ್ನು ಸುಪರ್ದಿಗೆ ಪಡೆಯುವ ಕಾರ್ಯಾಚರಣೆಗೆ ಚಾಲನೆ ನೀಡಿದೆ.

ಜಿಲ್ಲಾಧಿಕಾರಿ ಸೂಚನೆಯಂತೆ ಪ್ರಥಮವಾಗಿ ದೊಡ್ಡಬಳ್ಳಾಪುರದಲ್ಲಿ ಕಾರ್ಯಾಚರಣೆಗೆ ಚಾಲನೆ ದೊರೆತಿದೆ.

ತಾಲೂಕಿನ ವಿವಿಧೆಡೆ 17.11 ಎಕರೆಯಲ್ಲಿ ನಿರ್ಮಾಣವಾಗಿದ್ದ ಬಡಾವಣೆಗಳನ್ನು ತೆರವುಗೊಳಿಸಲಾಗಿದೆ. ಜಿಲ್ಲಾಧಿಕಾರಿ ಆದೇಶದಂತೆ ತಹಸೀಲ್ದಾರ್ ಶಿವರಾಜ್ ನೇತೃತ್ವದಲ್ಲಿ ಅನಧಿಕೃತ ಬಡಾವಣೆಗಳ ತೆರವು ಕಾರ್ಯ ನಡೆದಿದೆ.

ತಹಸೀಲ್ದಾರ್‌ಗಳಿಗೆ ಜವಾಬ್ದಾರಿ ವಹಿಸಲಾಗಿದ್ದು, ಅಕ್ರಮ ಲೇಔಟ್ ನಿರ್ಮಿಸಿರುವ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಜಿಲ್ಲಾಡಳಿತ ಮುಂದಾಗಿದೆ. ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕುಗಳಿಗೆ ಅನ್ವಯವಾಗುವಂತೆ ಈ ಆದೇಶ ಹೊರಡಿಸಿದೆ.

17 ಎಕರೆ ಸ್ವಾಧೀನ: ಭೂ ಪರಿವರ್ತನೆಯಾಗದ ಮತ್ತು ಯೋಜನಾ ಪ್ರಾಧಿಕಾರಗಳಿಂದ ಅನುಮತಿ ಪಡೆಯದೆ ನಿರ್ಮಾಣವಾಗಿರುವ ಬಡಾವಣೆಗಳ ವಿರುದ್ಧ ಮೊದಲ ಹಂತದಲ್ಲಿ ಕಾರ‌್ಯಾಚರಣೆ ನಡೆದಿದೆ. ಮಧುರೆ ಹೋಬಳಿಯ ಹೊನ್ನವಾರದಲ್ಲಿ 3 ಎಕರೆ, ನಾಗೇನಹಳ್ಳಿಯಲ್ಲಿ 9.20ಎಕರೆ, ಕೆಂಜಿಗದಹಳ್ಳಿಯಲ್ಲಿ 4.30 ಎಕರೆಯಲ್ಲಿ ನಿರ್ಮಾಣವಾಗಿದ್ದ ಬಡಾವಣೆಗಳನ್ನು ತೆರವುಗೊಳಿಸಲಾಗಿದೆ.

ತಹಸೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆಗೆ ಸೂಚಿಸಲಾಗಿದೆ. ನಾಲ್ಕೂ ತಾಲೂಕುಗಳಲ್ಲಿ ಕಾರ್ಯಾಚರಣೆ ನಡೆಯಲಿದ್ದು ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಜಿಲ್ಲಾಡಳಿತ ಸೂಚನೆಯಂತೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅನಧಿಕೃತ ಬಡಾವಣೆಗಳ ತೆರವು ಮಾಡಲಾಗುತ್ತಿದೆ. ಕಾರ್ಯಾಚರಣೆ ಬಳಿಕ ಜಾಗವನ್ನು ಸರ್ಕಾರದ ಸುಪರ್ದಿಗೆ ಪಡೆಯಲಾಗುತ್ತಿದೆ. ಶಿವರಾಜ್, ತಹಸೀಲ್ದಾರ್ ದೊಡ್ಡಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net