ಸಿಂಧನೂರು: ಖಾಸಗಿ ಆಸ್ತಿಗಳಿಗೆ ಪಹಣಿಯಲ್ಲಿ ವಕ್ಫ್ ಮಂಡಳಿಯ ಹೆಸರು ನಮೂದಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರೆಲ್ಲರೂ ಸೇರಿ ವಕ್ಫ್ ಸಂತ್ರಸ್ತರ ಹೋರಾಟ ಸಮಿತಿ ರಚಿಸಿಕೊಂಡಿದ್ದು ಮಂಡಳಿಯ ವಿರುದ್ಧ ಡಿ.17 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಸರ್ವೋತ್ತಮ ರೆಡ್ಡಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಕ್ಫ್ ಸಂತ್ರಸ್ತರ ಹೋರಾಟ ಸಮಿತಿಯಲ್ಲಿ ಹಿಂದುಗಳು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಒಳಗೊಂಡಿರುವುದರಿಂದ ಪಕ್ಷಾತೀತ ಜಾತ್ಯಾತೀತ ಧರ್ಮಾತೀತವಾಗಿ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ.
ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಪೀಠಾಧಿಪತಿ ಸಿದ್ದಲಿಂಗ ಮಹಾಸ್ವಾಮೀಜಿ ನೇತ್ರತ್ವದಲ್ಲಿ ಹಾಲುಮತ ಸಮಾಜದ ಮಾದಯ್ಯ ಗುರುವಿನ ವಾಲ್ಮೀಕಿ ಸಮಾಜದ ಗುರುಗಳು ರೌಡಕುಂದ ಶ್ರೀಗಳು ಸೇರಿದಂತೆ ಎಲ್ಲ ಸಮುದಾಯಗಳ ಅಧ್ಯಕ್ಷರು ಮುಖಂಡರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸದಸ್ಯರಾದ ಆನಂದ ರಾಯಭಾಗಿ, ವಿಶ್ವನಾಥ ಚೌದರಿ, ಕೊಂಡಲರಾಜು ಇತರರಿದ್ದರು.