

ವಿಜಯಪುರ: ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರೇ ಕಬಳಿಸಿದ್ದಾರೆಂಬುದು ಅನ್ವರ್ ಮಾನಿಪ್ಪಾಡಿ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಮಾನಪ್ಪಾಡಿ ವರದಿಯಲ್ಲಿ ಕಾಂಗ್ರೆಸ್ ನಾಯಕರು ವಕ್ಫ್ ಆಸ್ತಿ ಕಬಳಿಕೆ ಮಾಡಿದ್ದಾಗಿ ತಿಳಿಸಿದ್ದು, ಅದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ, ಕೆ.ರಹಿಮಾನ್ ಖಾನ್, ಸಿಎಂ ಇಬ್ರಾಹಿಂ, ಹ್ಯಾರಿಸ್ ಹೆಸರಿದೆ. ಸುಮಾರು 2.70 ಸಾವಿರ ಕೋಟಿ ರೂ.ಮೌಲ್ಯದ ಆಸ್ತಿ ನುಂಗಿ ನೀರು ಕುಡಿದಿರುವುದು ಉಲ್ಲೇಖಿಸಲಾಗಿದೆ ಎಂದು ಮಂಗಳವಾರ ಸುದ್ದಿಗಾರರಿಗೆ ಅವರು ಪ್ರತಿಕ್ರಿಯಿಸಿದರು.
ಆಸ್ತಿ ಕ್ರೂಢೀಕರಿಸಿ ರಕ್ಷಣೆ ಮಾಡುವುದಾಗಿ ನಮ್ಮ ಪಕ್ಷದವರು ಹೇಳಿದ್ದಾರೆ. ಅದರರ್ಥ ವಕ್ಫ್ ಬೋರ್ಡ್ ರಕ್ಷಿಸಬೇಕೆಂದಲ್ಲ. ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಕೆಲಸ ನಡೆಸಿದೆ. ಪ್ರಧಾನಿ ಸಹ ವಕ್ಫ್ ತಿದ್ದುಪಡಿಗಾಗಿ ಗಂಭೀರ ನಿರ್ಣಯ ತೆಗೆದುಕೊಂಡಿದ್ದಾರೆ. ಜಗತ್ತಿನ ಯಾವುದೇ ಶಕ್ತಿ ಈ ತಿದ್ದುಪಡಿಗೆ ವಿರೋಧ ಮಾಡಿದರೂ ತಿದ್ದುಪಡಿ ತಂದೇ ತರುವುದಾಗಿ ಮೋದಿ ಹೇಳಿದ್ದಾರೆ. ರೈತರ ಲಕ್ಷಾಂತರ ಎಕರೆ ಜಮೀನು ನೋಟಿಸ್ ಕೊಡದೇ ವಕ್ಫ್‌ಗೆ ಸೇರ್ಪಡೆ ಮಾಡಲಾಗುತ್ತಿದೆ. ಮಠ ಮಂದಿರಗಳ ಆಸ್ತಿಯೂ ಸೇರ್ಪಡೆ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣದ ಗಂಭೀರತೆ ಅರಿತು ಕೇಂದ್ರ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರು ಸಹ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದರು.
ನ. 7ರಂದು ಕೇಂದ್ರದ ಜಂಟಿ ಸಮಿತಿಯ ಚೇರಮನ್ ಜಗದಾಂಬಿಕಾ ಪಾಲ್ ವಿಜಯಪುರಕ್ಕೆ ಆಗಮಿಸುತ್ತಿದ್ದಾರೆ. ರೈತರ ಅಹವಾಲು ಸ್ವೀಕರಿಸಿ ಜಿಲ್ಲಾಡಳಿತ ಜೊತೆ ಚರ್ಚೆ ನಡೆಸಲಿದ್ದಾರೆ. ವಕ್ಫ್ ಸಚಿವ ಜಮೀರ್‌ಅಹ್ಮದ್ ಖಾನ್ ರಾತ್ರೋರಾತ್ರಿ ರೈತರ ಆಸ್ತಿಯನ್ನು ವಕ್ಫ್‌ಗೆ ಸೇರ್ಪಡೆ ಮಾಡಿದ್ದನ್ನು ಬ್ರೇಕ್ ಹಾಕಲು ಸಮಿತಿ ಚೇರವನ್ ಬರುತ್ತಿದ್ದು, ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.