ವಕ್ಫ್ ಆಸ್ತಿ ನಿಮ್ಮಪ್ಪಂದೂ ಅಲ್ಲ-ನಮ್ಮಪ್ಪಂದೂ ಅಲ್ಲ, ಸಚಿವ ಜಮೀರ್ ಹೇಳಿಕೆಗೆ ಶಾಸಕ ಯತ್ನಾಳ ತಿರುಗೇಟು !

YATNAL-JAMEER
Published on

ವಿಜಯಪುರ: ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಸಚಿವ ಜಮೀರ್‌ಅಹ್ಮದ್‌ಖಾನ್ ಮತ್ತು ಶಾಸಕ ಯತ್ನಾಳ ನಡುವೆ ತೀವ್ರ ವಾಗ್ವಾದ ಆರಂಭಗೊಂಡಿದೆ.
ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳರು ತೆಗೆದಿರುವ ತಗಾದೆಗೆ ಸಚಿವ ಜಮೀರ್‌ಅಹ್ಮದ್‌ಖಾನ್, ‘ವಕ್ಫ್ ಆಸ್ತಿ ಯತ್ನಾಳರ ಅಪ್ಪಂದೂ ಅಲ್ಲ-ನಮ್ಮಪ್ಪಂದೂ ಅಲ್ಲ. ಅದು ದಾನಿಗಳು ನೀಡಿದ ಆಸ್ತಿ’ ಎಂದು ಖಾರವಾಗಿ ನುಡಿದಿದ್ದರು.

ಇದೀಗ ಪ್ರತ್ಯುತ್ತರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂದೇಶ ಬಿತ್ತರಿಸಿದ್ದು, ‘ಜಮೀರ್‌ಅಹ್ಮದ್ ಅವರೇ, ಅಪ್ಪನಿಂದ ಬಂದ ಆಸ್ತಿ ಕಾನೂನು ಬದ್ಧವಾಗಿರುತ್ತದೆ. ಯಾರದೋ ಅಪ್ಪನ ಆಸ್ತಿಯನ್ನು ನಮ್ಮದು ಎಂದು ಹೇಳುವ ವಕ್ಫ್ ಪರಿಕಲ್ಪನೆ, ಕಾನೂನು ಅಸಂವಿಧಾನಿಕ ಹಾಗೂ ಕಾನೂನು ಬಾಹಿರ ಎಂದಿದ್ದಾರೆ.

ಜಮೀರ್‌ಅವರೇ, ದೇಣಿಗೆ ಪಡೆದು ಇಂದು ವಕ್ಫ್ ಭಾರತದ ಮೂರನೇ ಅತಿದೊಡ್ಡ ಭೂ ಒಡೆಯ ಆಗಿದೆಯಾ? ಇದನ್ನು ನಂಬುವುದಕ್ಕೆ ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.

ವಕ್ಫ್‌ನಿಂದ ಆರ್ಥಿಕ ಸಮಾನತೆ ಸಾಧ್ಯವಿದೆಯೇ? ಅಸಲಿಗೆ, ವಕ್ಫ್‌ನಂಥ ಕಾಯ್ದೆ ಮುಸ್ಲಿಂ ಬಾಹುಳ್ಯ ದೇಶಗಳಲ್ಲೇ ಇಲ್ಲ, ಇನ್ನು ಜಾತ್ಯತೀತ ದೇಶವಾದ ಭಾರತದಲ್ಲಿ ಏಕೆ ಬೇಕು? ರೋಷಾವೇಶದಿಂದ ಟೀಕೆ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ, ಜಾತ್ಯತೀತ ರಾಷ್ಟ್ರದಲ್ಲಿ ವಕ್ಫ್ ಕಾನೂನುಗಳು ಅರಾಜಕತೆ ಉಂಟುಮಾಡುತ್ತದೆ ಎಂಬುದನ್ನು ತಿಳಿಯಿರಿ.

ಸಿಕ್ಕ ಸಿಕ್ಕ ಭೂಮಿ ನಮ್ಮದು ಎಂದು ನಿಮ್ಮ ಷರಿಯಾ ಕಾನೂನನ್ನು ಇಲ್ಲಿ ಅನ್ವಯಗೊಳಿಸಲು ಇದು ಇರಾನ್ ಅಥವಾ ಟರ್ಕಿ ಅಲ್ಲ. ಇದು ಭಾರತ. ಜವಾಬ್ದಾರಿಯುತ ಸಚಿವರಾಗಿ, ತೂಕವಾಗಿ, ಪ್ರಬುದ್ಧತೆಯಿಂದ ಮಾತನಾಡಿ. ಕುಂಟುತ್ತಿರುವ ನಿಮ್ಮ ಘನತೆಗೆ ಸರಿಯಾದೀತು ಎಂದು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net