ವಕ್ಫ್ ವಿಚಾರ ಬಿಜೆಪಿಗೆ ಉಪಚುನಾವಣೆ ಅಸ್ತ್ರ

congress leader h.c.yogesh press meet
ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿದರು. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪ್ರಮುಖರಾದ ಖಲೀಂ ಪಾಷಾ ಸುದ್ದಿಗೋಷ್ಠಿಯಲ್ಲಿದ್ದರು.
Published on

ಶಿವಮೊಗ್ಗ: ಮಹಾರಾಷ್ಟ್ರ ವಿಧಾನಸಭೆ, ಕರ್ನಾಟಕ ಸೇರಿ 15 ರಾಜ್ಯಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿ ವಕ್ಫ್ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ದೂರಿದರು.

ವಕ್ಫ್ ವಿವಾದ ರಾಜ್ಯದೆಲ್ಲೆಡೆ ಹಬ್ಬುತ್ತಿದ್ದು, ಇದಕ್ಕೆ ಸಂಬಂಧಿಸಿ ಈಗಾಗಲೇ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ. ರೈತರ ಹೆಸರಿನಲ್ಲಿರುವ ಜಮೀನಿನಲ್ಲಿ ವಕ್ಫ್ ಹೆಸರಿನಲ್ಲಿ ಪಹಣಿ ಇದ್ದರೆ ಅದನ್ನು ತೆಗೆದು ಹಾಕಲು ಹೇಳಿದ್ದಾರೆ. ಆದರೂ ಬಿಜೆಪಿಯವರು ಚುನಾವಣಾ ಅಸ್ತ್ರವಾಗಿಸಿಕೊಂಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಕಿಡಿಗೇಡಿತನದ ಹೇಳಿಕೆ ನೀಡುತ್ತಿದ್ದು, ಶಾಂತವಾಗಿರುವ ಶಿವಮೊಗ್ಗದಲ್ಲಿ ಮತ್ತೆ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಶಿವಮೊಗ್ಗಕ್ಕೆ ಬರುವುದು ಬೇಡ. ಇಲ್ಲಿಯೂ ಅವರು ವಕ್ಫ್ ಆಸ್ತಿ ಉಳಿಸಲು ಬರುತ್ತಾರೆಂದು ಪ್ರಚೋದನಕಾರಿ ಹೇಳಿಕೆ ನೀಡುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಚನ್ನಬಸಪ್ಪ ಅವರಿಗೆ ಶಿವಮೊಗ್ಗದಲ್ಲಿ ಯಾವಾಗಲೂ 144 ಸೆಕ್ಷನ್ ಜಾರಿಯಲ್ಲಿರಬೇಕಿದೆ. ರಾಜ್ಯಾದ್ಯಂತ ವಕ್ಫ್ ಬೋರ್ಡ್‌ನಲ್ಲಿ 15ಕ್ಕೂ ಹೆಚ್ಚು ಬಿಜೆಪಿ ಸದಸ್ಯರಿದ್ದು, ಅವರೆಲ್ಲ ರಾಜೀನಾಮೆ ನೀಡಬಹುದಿತ್ತಲ್ಲವೇ? ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಆಶ್ರಯ ಮನೆಗಳ ವಿಚಾರಕ್ಕಾಗಿ ಶಿವಮೊಗ್ಗಕ್ಕೆ ಬರಲು ಒಪ್ಪಿಕೊಂಡಿದ್ದಾರೆ. ಅಲ್ಪಸಂಖ್ಯಾತರಿಗೆ ಮನೆ ಕೊಡಲು ಬರುತ್ತಿಲ್ಲ. ಶಿವಮೊಗ್ಗಕ್ಕೆ 125 ಕೋಟಿ ರೂ. ಅನುದಾನವನ್ನು ಸರ್ಕಾರವೇ ಬಿಡುಗಡೆ ಮಾಡಿ ಆಶ್ರಯ ಮನೆಗಳ ಲಾನುಭವಿಗಳ ಹಣವನ್ನೂ ಪಾವತಿಸಲಿದೆ ಎಂದರು.

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಪ್ರಮುಖರಾದ ಖಲೀಂ ಪಾಷಾ, ಚಂದ್ರಶೇಖರ್, ಯಮುನಾ ರಂಗೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net