ವಕ್ಫ್ ಹಠಾವೋ-ದೇಶ ಬಚಾವೋ...ಶಾಸಕ ಯತ್ನಾಳ ನೇತೃತ್ವದ ಅನಿರ್ದಿಷ್ಟಾವಧಿ ಧರಣಿ

YATNAL DHARANI
ವಿಜಯಪುರ ಜಿಲ್ಲಾಡಳಿತಕ್ಕೆ ವಕ್ಫ್ ಕಾಯ್ದೆ ರದ್ಧತಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ರಮೇಶ ಜಿಗಜಿಣಗಿ, ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರಿದ್ದಾರೆ.
Published on

ವಿಜಯಪುರ: ವಕ್ಫ್ ಬೋರ್ಡ್‌ಗೆ ಸಂಬಂಧಿಸಿದಂತೆ 1974 ರ ಗೆಜೆಟ್ ರದ್ದು ಮಾಡುವುದು, ಮಠ-ಮಾನ್ಯಗಳು, ಐತಿಹಾಸಿಕ ಸ್ಮಾರಕಗಳು, ರೈತರ ಜಮೀನು ಮತ್ತಿತರ ಆಸ್ತಿಗಳನ್ನು ವಕ್ಫ್‌ನಿಂದ ಕೈ ಬಿಡುವುದು, ಕಾನೂನು ವಿರೋಧಿಯಾಗಿ ವಕ್ಫ್ ಅದಾಲತ್ ನಡೆಸಿದ ಜಮೀರ್‌ಅಹ್ಮದ್ ಅವರನ್ನು ಸಂಪುಟದಿಂದ ಕೈಬಿಡುವುದು, ಮತಾಂಧತೆ ಹರಡುತ್ತಿರುವ ಜಮೀರ್ ಮೇಲೆ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಆಗ್ರಹಿಸಿದರು.

ಇಲ್ಲಿನ ಜಿಲ್ಲಾಡಳಿತ ಕಚೇರಿ ಎದುರು ‘ವಕ್ಫ್ ಹಠಾವೋ-ದೇಶ ಬಚಾವೋ, ಮಾರಕ ವಕ್ಫ್ ಕಾಯ್ದೆ ನಿರ್ಮೂಲನೆ ನಮ್ಮೆಲ್ಲರ ಗುರಿ’ ಘೋಷವಾಕ್ಯದಡಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಸೋಮವಾರ ಆರಂಭಗೊಂಡ ಅನಿರ್ದಿಷ್ಟಾವಧಿ ಸತ್ಯಾಗ್ರಹದಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ರಾಣಿ ಚನ್ಮಮ್ಮನ ಸ್ಮಾರಕಗಳು, ಹೊಯ್ಸಳರು, ಚಾಲುಕ್ಯರು ದೇವಸ್ಥಾನಗಳಿಗೆ ನೀಡಿದ ಜಮೀನುಗಳು ಸಹ ವಕ್ಫ್ ಎಂದಾಗುತ್ತಿವೆ. ವಕ್ಫ್ ಬೋರ್ಡ್ ಎಂಬುದು ಈ ದೇಶಕ್ಕೆ ಮಾರಕವಾಗಿದೆ. ಯಾವುದೇ ಸಿವಿಲ್ ಕೋರ್ಟ್, ಹೈಕೋರ್ಟ್ ಅಷ್ಟೇ ಏಕೆ ಸುಪ್ರೀಂ ಕೋರ್ಟ್‌ಗೂ ವಕ್ಫ್ ಕುರಿತು ವಿಚಾರಣೆ ನಡೆಸುವ ಅಧಿಕಾರ ಇಲ್ಲ. ಇಂಥ ಕರಾಳ ಕಾಯ್ದೆಯನ್ನು ಕಿತ್ತೊಗೆಯಬೇಕು ಎಂದರು.

ಶಾಸಕ ಯತ್ನಾಳ ಅಬ್ಬರ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಕರ್ನಾಟಕದಲ್ಲಿ 6 ಲಕ್ಷಕ್ಕೂ ಅಧಿಕ ಎಕರೆ ಭೂಮಿಯನ್ನು ವಕ್ಫ್ ಆಸ್ತಿ ಎಂದು ತೋರಿಸುವ ಹುನ್ನಾರ ನಡೆದಿದೆ. ಖಬರಸ್ತಾನಗಳನ್ನು ನೋಡಿ ಸೈತಾನ್‌ಗಳು ಹೊಟ್ಟೆ ಕಿಚ್ಚು ಪಡಬೇಕು ಎಂದು ಸಚಿವ ಜಮೀರ್‌ಅಹ್ಮದ್ ಖಾನ್ ಹೇಳಿದ್ದಾರೆ. ಅವರ ಪ್ರಕಾರ, ಸೈತಾನ್‌ಗಳು ಎಂದರೆ ನಾವು ಹಿಂದುಗಳು. ಅವರ ಧರ್ಮನೇ ಹಾಗೆ ಹೇಳುತ್ತದೆ. ನಾವು ಜಾತಿ ಬಿಡಲಿಲ್ಲ ಎಂದರೆ ದಲಿತರ ಭೂಮಿಯನ್ನೂ ಕೊಳ್ಳೆ ಹೊಡೆಯುತ್ತಾರೆ. ಮುಂದೆಯಾದರೂ ಧರ್ಮ ಯುದ್ಧವಾಗುವುದಿದ್ದರೆ ನಾವು ಧರ್ಮ ಯುದ್ಧಕ್ಕೆ ತಯಾರಿದ್ದೇವೆ. ನಮ್ಮ ಶಿವ, ಚಾಮುಂಡೇಶ್ವರಿ ಕೈಯಲ್ಲಿ ಆಯುಧಗಳು ಇವೆ ಎಂದರು.

ಕೇಂದ್ರ ಸರ್ಕಾರವು ವಕ್ಫ್ ಕಾಯ್ದೆ ತಿದ್ದುಪಡಿಗೆ ಮುಂದಾಗಿದೆ. ಆದರೆ, ಅವರು (ಮುಸ್ಲಿಮರು) ಕಡಪ, ಪಾಟ್ನಾದಲ್ಲಿ 5 ಲಕ್ಷ ಜನ ಸೇರಿಸುತ್ತೇವೆ ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಸಿಎಂ ನಿತೀಶ ಕುಮಾರ್‌ಗೆ ಬೆದರಿಕೆಯೊಡ್ಡುತ್ತಿದ್ದಾರೆ. ಆದರೆ, ಏನೇ ಆಗಲಿ ಇಡೀ ವಕ್ಫ್ ಕಾಯ್ದೆ ಸಂಪೂರ್ಣವಾಗಿ ತೊಲಗಬೇಕು ಎಂದರು.

ರಾಜ್ಯದಲ್ಲಿ ಸ್ವಾಮೀಜಿಗಳು ಮಸೀದಿ ಉದ್ಘಾಟನೆ ಮಾಡುತ್ತಾರೆ. ಸ್ವಾಮೀಜಿಗಳು ಒಂದು ಮಸೀದಿ ಉದ್ಘಾಟಿಸಿದರೆ, ಆ ಇಡೀ ಊರನ್ನು ಇಸ್ಲಾಂ ಮಾಡಿದಂತೆ ಎಂಬುವುದನ್ನು ತಿಳಿದುಕೊಳ್ಳಬೇಕು. ಸ್ವಾಮೀಜಿಗಳು ಕುರಾನ್ ಪಠಣ ಮಾಡುತ್ತಾರೆ. ಅದನ್ನು ಬಿಟ್ಟು ನಮ್ಮಲ್ಲೇ ಶ್ರೇಷ್ಠ ಭಗವದ್ಗೀತೆ ಇದೆ. ಬಸವಣ್ಣನ ವಚನಗಳು ಇವೆ. ಇವುಗಳನ್ನು ಪಠಣ ಮಾಡಿ. ಇವರು ಜಾತ್ಯತೀತ ಎಂದುಕೊಂಡು ಮಹಾತ್ಮ ಗಾಂಧಿ ಆಗಬೇಕು ಎಂದುಕೊಂಡಿದ್ದಾರೆ ಎಂದು ಕುಟುಕಿದರು.

ಮಹಾತ್ಮ, ಮಹಾತ್ಮ ಎಂದೇ ಈ ದೇಶ ಹಾಳಾಗಿದೆ. ಇವತ್ತು ಏನಾದರೂ ಮಹಾತ್ಮ ಅಂದರೆ, ಅದು ಬಾಬಾಸಾಹೇಬ್ ಅಂಬೇಡ್ಕರ್. ನಾವು ಅವರ ಪಾದ ತೊಳಿದು ಪೂಜೆ ಮಾಡಬೇಕು. ಭಾರತ, ಪಾಕಿಸ್ತಾನ ಇಬ್ಭಾಗ ಮಾಡಲು ನನ್ನ ಒಪ್ಪಿಗೆ ಇಲ್ಲ. ಒಂದು ವೇಳೆ ಭಾರತ, ಪಾಕಿಸ್ತಾನ ಅನಿವಾರ್ಯವಾಗಿದ್ದರೆ, ಇಲ್ಲಿರುವ ಮುಸ್ಲಿಮರನ್ನು ಅಲ್ಲಿಗೆ ಕಳುಹಿಸಿ, ಅಲ್ಲಿರುವ ಹಿಂದುಗಳನ್ನು ಇಲ್ಲಿಗೆ ಕರೆಯಿಸಿ. ಇಸ್ಲಾಂನಲ್ಲಿ ಸಹೋದರತ್ವ ಭಾವನೆ ಇಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ನಾವು ಹಿಂದೂಗಳು ಸಂವಿಧಾನವನ್ನು ಒಪ್ಪುತ್ತೇವೆ. ಆದರೆ, ಅವರು ಸಂವಿಧಾನ ಒಪ್ಪುವುದಿಲ್ಲ ಎಂದು ಆರೋಪಿಸಿದರು.

ಪ್ರಾಣ ಹೋದರೂ ಹೋರಾಟ ಬಿಡಲ್ಲ

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಪ್ರಾಣ ಹೋದರೂ ಹೋರಾಟದಿಂದ ಹಿಂದೆ ಸರಿಯಲ್ಲ. ಯತ್ನಾಳರ ಹೋರಾಟಕ್ಕೆ ಬೆಂಬಲ ಇದೆ. ರೈತರ ಜೊತೆ ನಾನಿರುವೆ ಎಂದರು.

ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸ್ವಾಮೀಜಿಗಳು ಹಾಗೂ ರೈತರ ಈ ಹೋರಾಟಕ್ಕೆ ಜಯ ಸಿಗುವ ವಿಶ್ವಾಸ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ವಿರೋಧಿ, ರೈತ ವಿರೋಧಿ ನಿಲುವು ತೆಗೆದುಕೊಂಡಾಗ ಧ್ವನಿ ಎತ್ತಿದವರು ಮಠಾಧೀಶರು. ಸರ್ಕಾರ ವಕ್ಫ್ ಕಾಯ್ದೆ ಮೂಲಕ ನಾಡಿನ ರೈತರ ಹಕ್ಕು ಕಸಿದು ಮೋಸ ಮಾಡುತ್ತಿರುವಾಗ ಧ್ವನಿ ಎತ್ತಬೇಕಾದದ್ದು ಅತ್ಯಗತ್ಯ ಎಂದರು.

ಕೇಂದ್ರದಲ್ಲಿ ಮೋದಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಾಗ ಪ್ರತಿಪಕ್ಷಗಳು ವಿರೋಧಿಸಿದವು. ಜಂಟಿ ಸಂಸದೀಯ ಸಮಿತಿಯಲ್ಲಿ ಚರ್ಚೆ ನಡೆಯುತ್ತಿರುವಾಗಲೇ ತರಾತುರಿಯಲ್ಲಿ ರೈತರ ಜಮೀನು ವಕ್ಫ್‌ಗೆ ಸೇರ್ಪಡೆ ಮಾಡಲಾಗುತ್ತಿದೆ. ರೈತರ ಜಮೀನು ಮುಟ್ಟಿದರೆ ನಿಮಗೆ ಭವಿಷ್ಯವಿಲ್ಲ ಎಂದು ಜಮೀರ್‌ಅಹ್ಮದ್ ವಿರುದ್ಧ ಹರಿಹಾಯ್ದರು.

ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮೀಜಿ, ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಮುಖಂಡರಾದ ದಯಾಸಾಗರ ಪಾಟೀಲ, ಕಾಸುಗೌಡ ಬಿರಾದಾರ, ಉಮೇಶ ಕಾರಜೋಳ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net