ಪಹಣಿಯಲ್ಲಿ ವಕ್ಫ್ ಬೋರ್ಡ್‌ಗೆ ಗೇಟ್‌ಪಾಸ್: ಕೊತ್ತತ್ತಿ ರೈತನಿಗೆ ಸಿಕ್ಕಿತು ನ್ಯಾಯ

Waqf Board Name Deleted in Pahani Mandya
Published on

ಮಂಡ್ಯ: ತಾಲೂಕಿನ ಕೊತ್ತತ್ತಿ ಗ್ರಾಮದ ರೈತನ ಕೃಷಿ ಭೂಮಿಯ ಪಹಣಿಯಲ್ಲಿ ನಮೂದಾಗಿದ್ದ ವಕ್ಫ್ ಬೋರ್ಡ್ ಹೆಸರನ್ನು ಜಿಲ್ಲಾಡಳಿತ ತೆಗೆದು ಹಾಕಿದೆ. ಇದರೊಂದಿಗೆ ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಿಂದ ರೈತನಿಗೆ ನ್ಯಾಯ ಸಿಕ್ಕಿದಂತಾಗಿದೆ.

ಮಂಡ್ಯ ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದ ಸೋಮಶೇಖರ್ ಹಾಗೂ ಸರ್ಕಾರಿ ಗುಂಚು ತೋಪು ಹೆಸರಿನಲ್ಲಿದ್ದ ಮೂರು ಎಕರೆ ಜಮೀನಿನ ಪಹಣಿನ ‘ಹಕ್ಕುಗಳು’ ಕಾಲಂನಲ್ಲಿ ಮುದ್ರಿತವಾಗಿದ್ದ ವಕ್ಫ್ ಬೋರ್ಡ್ ಹೆಸರನ್ನು ಡಿಲಿಟ್ ಮಾಡಿ ಮೊದಲಿನಂತೆ ತಿದ್ದುಪಡಿ ಮಾಡಲಾಗಿದೆ.

ಏನಿದು ವಿವಾದ?: ಕೊತ್ತತ್ತಿ ಗ್ರಾಮದ ರೈತ ಸೋಮಶೇಖರ್ ಇತ್ತೀಚೆಗೆ ಆರ್‌ಟಿಸಿ ಪರಿಶೀಲನೆ ನಡೆಸಿದಾಗ ಹಕ್ಕು ಬದಲಾಗಿರುವುದು ಗೊತ್ತಾಗಿತ್ತು. ಇದರಿಂದಾಗಿ ಹಲವು ವರ್ಷದಿಂದ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ರೈತನಿಗೆ ಆತಂಕ ಎದುರಾಗಿತ್ತು. ಸರ್ವೇ ನಂಬರ್ 237ರಲ್ಲಿ ಒಂದು ಎಕರೆ ಸರ್ಕಾರಿ ಗುಂಚುತೋಪು, ಉಳಿದೆರೆಡು ಎಕರೆ ಸೋಮಶೇಖರ್ ಹೆಸರಿನಲ್ಲಿತ್ತು. ಈ ಜಾಗ ಪಿತ್ರಾರ್ಜಿತ ಆಸ್ತಿಯಾಗಿದ್ದು, ಹಕ್ಕು ಕಾಲಂನಲ್ಲಿ ವಕ್ಫ್ ಬೋರ್ಡ್ ಹೆಸರು ಹೇಗೆ ನಮೂದಾಗಿತ್ತೆನ್ನುವ ಅನುಮಾನ ಕಾಡಲಾರಂಭಿಸಿತ್ತು.

ಈ ಹಿನ್ನೆಲೆಯಲ್ಲಿ ಇಂಡುವಾಳು ಸಚ್ಚಿದಾನಂದ ನೇತೃತ್ವದಲ್ಲಿ ಗ್ರಾಮದ ಬ್ಯಾಲಕಮ್ಮ ದೇವಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಮಾತ್ರವಲ್ಲದೆ ಕಂದಾಯ ಇಲಾಖೆಗೆ ರೈತರಿಗೆ ಯಾವುದೇ ತೊಂದರೆಯಾದರೆ ಸಂಬಂಧಿಸಿದ ರೈತರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಕೋರ್ಟ್ ಅಥವಾ ಸಾಮಾನ್ಯ ನ್ಯಾಯಾಲಯಕ್ಕೆ ಹೋಗಬಹುದು. ಆದರೆ, ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದಾಗಿ ಸಮಸ್ಯೆಯಾದರೆ ವಕ್ಫ್ ಪ್ರಾಧಿಕಾರಕ್ಕೆ ಹೋಗಬೇಕು. ಇದು ದೇಶದಲ್ಲಿ ಎಲ್ಲೂ ಇಲ್ಲದ ಕಾನೂನಾಗಿದೆ. ರೈತನಿಗೆ ಆಗಿರುವ ಅನ್ಯಾಯವನ್ನು ತ್ವರಿತವಾಗಿ ಸರಿಪಡಿಸದಿದ್ದರೆ ಹೋರಾಟದ ಸ್ವರೂಪ ಬದಲಿಸುವ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತ, ಆರ್‌ಟಿಸಿಯಲ್ಲಾಗಿದ್ದ ತಪ್ಪನ್ನು ಸರಿಪಡಿಸಿದೆ.

Waqf Board Name Deleted in Pahani Mandya
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net