ವಕ್ಫ್ ಮಸೂದೆ ಮುಸ್ಲಿಂ ವಿರೋಧಿ ಅಲ್ಲ

prahlad joshi
Published on

ಹುಬ್ಬಳ್ಳಿ: ವಕ್ಫ್ ಮಸೂದೆ ಮುಸ್ಲಿಮರ ವಿರುದ್ಧವಿಲ್ಲ. ಬಡ ಮುಸ್ಲಿಮರಿಗೂ ನೂತನ ಮಸೂದೆ ಜಾರಿಯಿಂದ ಅನುಕೂಲವಾಗಲಿದೆ. ಕಾಯ್ದೆ ಅನುಷ್ಠಾನ ಬಳಿಕ ಮುಸ್ಲಿಂ ಸಮುದಾಯದವರಿಗೆ ಕಾಂಗ್ರೆಸ್‌ನ ಬಿಜ ಬಣ್ಣ ತಿಳಿಯಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ದೇಶದ 39 ಲಕ್ಷ ಎಕರೆಗೆ ವಕ್ಫ್ ಆಸ್ತಿಯಿಂದ 168 ಕೋಟಿ ರೂ. ಆದಾಯ ಬರುತ್ತಿದೆ. ಕರ್ನಾಟಕದಲ್ಲೇ 54 ಸಾವಿರ ಎಕರೆ ವಕ್ಫ್ ಜಮೀನಿದೆ. ಈ ಆಸ್ತಿಯನ್ನು ಸರಿಯಾಗಿ ಬಳಸಿದರೆ, ಸಾಚಾರ್ ಕಮಿಟಿ ವರದಿ ಪ್ರಕಾರ 12 ಸಾವಿರ ಕೋಟಿ ರೂ. ಆದಾಯ ಬರ್ತಿತ್ತು. ಆದರೆ, ಆ ಹಣ ಎಲ್ಲಿಗೆ ಹೋಗಿದೆ? ಇದರಲ್ಲಿ ದುರುಪಯೋಗ, ಸ್ವಜನ ಪಕ್ಷಪಾತ ಇದೆ. ಕಂಡವರ ಆಸ್ತಿ ನುಂಗುತ್ತಿದ್ದಾರೆ. ನಾವೆಲ್ಲ ವಿಚಾರ ಮಾಡಿಯೇ ಕಾಯ್ದೆ ತಂದಿದ್ದೇವೆ ಎಂದರು.

ವಕ್ಫ್ ಮಸೂದೆ ಬಗ್ಗೆ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಬಹಳಷ್ಟು ಹಿಂದುಗಳ ಆಸ್ತಿ ವಕ್ಫ್‌ಗೆ ಹೋಗಿದೆ. ಅನೇಕ ಮುಸ್ಲಿಮರ ಮನೆಗಳನ್ನು ವಕ್ಫ್ ಮಾಡಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿ ಅನೇಕರ ಮುಸ್ಲಿಮರ ಮನೆ ವಕ್ಫ್ ಆಗಿದೆ. ವಕ್ಫ್ ಬೋರ್ಡ್ ಸರಿಯಾದ ರೀತಿಯಲ್ಲಿ ನಿರ್ವಹಣೆ ಆಗಬೇಕಿದೆ. ಇದು ಮುಸ್ಲಿಮರ ವಿರುದ್ಧವಿರೋ ಬಿಲ್ ಅಲ್ಲ. ಕಾಂಗ್ರೆಸ್ ಇದನ್ನು ಮುಸ್ಲಿಮರ ವಿರುದ್ಧವಿದೆ ಎಂದು ಬಿಂಬಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.

ಸೋನಿಯಾ ಗಾಂಧಿ ಮನ ಬಂದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅದೇ ರಾಜಮಾತೆಯ ಸುಪುತ್ರ ಸದನದಲ್ಲೇ ಬಿಲ್ ಪ್ರತಿ ಹರಿದು ಅಪಮಾನ ಮಾಡಿದ್ದಾರೆ. ಇದು ದೇಶದ ದುರ್ದೈವದ ಸಂಗತಿ ಎಂದು ಆರೋಪಿಸಿದರು.

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಅಲ್ಲಿನ ಕೆಲ ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಸರ್ಕಾರದ ಕೈಗೊಂಬೆ ಆಗಿದ್ದಾರೆ. ಅಲ್ಲಿನ ಪೊಲೀಸ್ ಅಧಿಕಾರಿಗಳಾದ ರಾಮಾನುಜ, ದೇವರಾಜ್ ಮೇಲೆ ಕ್ರಮ ಆಗಬೇಕು. ಇವರ ವಿರುದ್ದ ಹೈಕೋರ್ಟ್‌ನಲ್ಲಿ ಕೇಸ್ ಹಾಕಲು ಸೂಚಿಸಿದ್ದೇನೆ. ಕಾಂಗ್ರೆಸ್ ಸರ್ಕಾರದಲ್ಲಿನ ಅಸುಹಿಷ್ಣತೆ ಹೊರ ಬರುತ್ತಿದೆ. ಶೌಚಾಲಯ ಕುರಿತ ಫೋಟೋ ಹಾಕಿದ್ದಕ್ಕೆ ಕಿರುಕುಳ ನೀಡಿದ್ದಾರೆ. ಪೊಲೀಸರಿಗಾದರೂ ಬುದ್ಧಿ ಬೇಡವೇ?. ಯಾವ ಆಧಾರದಲ್ಲಿ ಕೇಸ್ ಮಾಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net