ವಕ್ಫ್ ಕಾಯ್ದೆಗೆ ತಿದ್ದುಪಡಿ ಆಗಲಿ: ಬಿವೈಆರ್

B y Raghavendra
Published on

ಶಿವಮೊಗ್ಗ: ಒಂದು ಲಕ್ಷ ಎಕರೆ ಇದ್ದ ವಕ್ಫ್ ಜಮೀನು ಈಗ 8-10 ಲಕ್ಷ ಎಕರೆಯಾಗಿರುವುದು ಹೇಗೆ? ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಮಾತ್ರ ಆಸ್ತಿ ಕಬಳಿಕೆ ತಡೆಯಲು ಸಾಧ್ಯ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ವಿಜಯಪುರದಲ್ಲಿ ರೈತರ ಜಮೀನು ಆರ್‌ಟಿಸಿಯಲ್ಲಿ ವಕ್ಫ್ ಎಂದು ನಮೂದಾಗಿರುವುದು ಹಾಗೂ ರೈತರಿಗೆ ನೋಟಿಸ್ ಜಾರಿ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಂಸತ್‌ನಲ್ಲಿ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವುದು ಖಚಿತ ಎಂದು ತಿಳಿದಿರುವುದರಿಂದಲೇ ತರಾತುರಿಯಲ್ಲಿ ರೈತರ ಆಸ್ತಿ ಕಬಳಿಸುವ ಪ್ರಯತ್ನ ನಡೆದಿದೆ ಎಂದು ದೂರಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂಮಿ ಕಬಳಿಕೆಗೆಂದು ರೈತರ ಹೊಲಕ್ಕೆ ಬೇಲಿ ಹಾಕುವ ಪ್ರಯತ್ನ ಇದಾಗಿದೆ. ಇದು ಆಸ್ತಿ ಕಬಳಿಸುವ ಷಡ್ಯಂತ್ರ. ಅದಕ್ಕಾಗಿಯೇ ವಿಜಯಪುರದಲ್ಲಿ ರೈತರ ಹೊಲಕ್ಕೂ ವಕ್ಫ್ ಬೋರ್ಡ್ ನೋಟಿಸ್ ನೀಡಿದೆ ಎಂದು ಕಿಡಿಕಾರಿದರು.

ವಕ್ಫ್‌ಬೋರ್ಡ್ ನಡೆಯ ವಿರುದ್ಧ ಹರಿಹಾಯ್ದ ಅವರು, ಜಂಟಿ ಸಂಸದೀಯ ಸಮಿತಿ ಮುಂದೆ ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿ ಬಗ್ಗೆ ಚರ್ಚೆ ನಡೆಯಲಿದೆ. ಬರಲಿರುವ ಚಳಿಗಾಲದ ಅಧಿವೇಶನದಲ್ಲಿ ಇದರ ಬಗ್ಗೆ ಸುದೀರ್ಘ ಚರ್ಚೆ ನಡೆಯುವ ಸಾಧ್ಯತೆ ಇದೆ. ಒಮ್ಮೆ ಸಂಸತ್‌ನಲ್ಲಿ ಸೂಕ್ತ ತೀರ್ಮಾನವಾದರೆ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net